ಬೆಂಗಳೂರು: ಕೇಂದ್ರ ಸರ್ಕಾರವು ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಿಜೆಪಿ ನಾಯಕರ ಮೇಲೂ ದಾಳಿ ನಡೆದರೆ ಅವರ ಬಳಿ ಎಷ್ಟು ಅಕ್ರಮ ಸಂಪತ್ತು ಸಂಗ್ರಹವಾಗಿದೆ ಎಂದು ತಿಳಿಯುತ್ತದೆ’ ಎಂದಿದ್ದಾರೆ.
ಜಾರ್ಖಂಡ್‌ನ ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಅವರಿಗೆ ಸಂಬಂಧಿಸಿದ ಸ್ಥಳಗಳಿಂದ ಸುಮಾರು ₹200 ಕೋಟಿಗೂ ಅಧಿಕ ಮೊತ್ತದ ನಗದು ವಶಕ್ಕೆ ಪಡೆಯಲಾಗಿದೆ ಎಂಬ ವರದಿಯ ಬೆನ್ನಲ್ಲೇ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
‘ತನಿಖಾ ಸಂಸ್ಥೆಗಳು ಯಾಕೆ ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತವೆ. ಬಿಜೆಪಿ ನಾಯಕರ ಮೇಲೆ ದಾಳಿ ನಡೆಯುವುದಿಲ್ಲ ಯಾಕೆ’ ಎಂದು ಪ್ರಶ್ನಿಸಿದ್ದಾರೆ.
‘ಕಪ್ಪು ಹಣವನ್ನು ಯಾರೇ ಸಂಗ್ರಹಿಸಿದ್ದರು ಅದು ತಪ್ಪು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡಲಿ’ ಎಂದು ಹೇಳಿದ್ದಾರೆ.
ತೆರಿಗೆ ವಂಚನೆ ಪ್ರಕರಣ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭುವನೇಶ್ವರದ ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್‌ನ ವಿವಿಧ ಕಚೇರಿ ಮೇಲೆ ದಾಳಿ ನಡೆಸಿದ್ದು, ಜಪ್ತಿ ಮಾಡಿರುವ ಹಣ ₹ 290 ಕೋಟಿಗೆ ಏರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಸಾಹು ಅವರಿಗೆ ಸೇರಿದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.