ADVERTISEMENT

PV Web Exclusive | ಬಂಗಾಳಕೊಲ್ಲಿಯಲ್ಲಿ ಚೀನಾ ಪ್ರಭಾವಕ್ಕೆ ಕಡಿವಾಣ

ಮ್ಯಾನ್ಮಾರ್‌ಗೆ ಜಲಾಂತರ್ಗಾಮಿ ಕೊಡುಗೆ

ಘನಶ್ಯಾಮ ಡಿ.ಎಂ.
Published 17 ಅಕ್ಟೋಬರ್ 2020, 9:23 IST
Last Updated 17 ಅಕ್ಟೋಬರ್ 2020, 9:23 IST
ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ (ಸಂಗ್ರಹ ಚಿತ್ರ)
ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ (ಸಂಗ್ರಹ ಚಿತ್ರ)   
""
""
""
""

ಉತ್ತರದ ಲಡಾಖ್‌ನ ಚೀನಾ ಗಡಿಯಲ್ಲಿ ಪರಿಸ್ಥಿತಿ ತಿಳಿಯಾಗುತ್ತಿಲ್ಲ. ಮುಂದೊತ್ತಿ ಬಂದು ಸಂಧಾನಕ್ಕೆ ಕುಳಿತು, ಉದಾರವಾಗಿ ಒಂದಿಷ್ಟು ಬಿಟ್ಟುಕೊಡುವ ಮತ್ತು ಹಲವಷ್ಟವನ್ನು ವಿವಾದಗ್ರಸ್ತ ಎಂದು ಘೋಷಿಸುವ ತಂತ್ರಕ್ಕೆ ಇದೇ ಮೊದಲ ಬಾರಿಗೆ ಭಾರತ ಪೆಟ್ಟುಕೊಟ್ಟಿದೆ. ವಾಸ್ತವ ನಿಯಂತ್ರಣ ರೇಖೆಯ ಏಳು ಕಡೆ ಭಾರತೀಯ ಸೇನೆಯು ಚೀನಾಕ್ಕೆ ಸೇರಿದ ಗಿರಿಶಿಖರಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂಬ ಮಾಹಿತಿಯನ್ನು ರಾಷ್ಟ್ರೀಯ ಮಾಧ್ಯಮಗಳು ಇಂದು (ಅ.17) ವರದಿ ಮಾಡಿವೆ.

ಲಡಾಖ್‌ನ ಭೀಕರ ಚಳಿಯಲ್ಲಿ ಭಾರತ-ಚೀನಾ ನಡುವೆ ಚದುರಂಗದಾಟ ಚಾಲ್ತಿಯಲ್ಲಿರುವಂತೆಯೇ ಚೀನಾಕ್ಕೆ ತೈಲೋತ್ಪನ್ನ ಮತ್ತು ಇತರ ಅಗತ್ಯ ಪರಿಕರಗಳನ್ನು ಸಾಗಿರುವ ಪ್ರಮುಖ ಜಲಮಾರ್ಗವಾದ ಹಿಂದೂ ಮಹಾಸಾಗರದಲ್ಲಿ ಭಾರತೀಯ ನೌಕಾಪಡೆಯ ಗಸ್ತು ಹೆಚ್ಚಾಗುತ್ತಿದೆ. ಲಡಾಖ್‌ನಲ್ಲಿ ಪರಿಸ್ಥಿತಿ ಕೈಮೀರಿದರೆ ಹಿಂದೂ ಮಹಾಸಾಗರದಲ್ಲಿ ಚೀನಾದ ಸರಬರಾಜು ಕೊಂಡಿಗಳನ್ನು ಕಳಚಿಹಾಕುವುದು, ತನ್ಮೂಲಕ ಇಕ್ಕಟ್ಟಿಗೆ ಸಿಲುಕಿಸುವುದು ಭಾರತದ ತಂತ್ರ.

ಭಾರತದ ಸುತ್ತಲೂ ‘ಮುತ್ತಿನ ಮಾಲೆ’ ಹೆಣೆದು ತನ್ನ ಜಲಸಂಪರ್ಕ ಮಾರ್ಗಗಳನ್ನು ಕಾಪಾಡಿಕೊಳ್ಳುವ ಚೀನಾದ ಪ್ರಯತ್ನಕ್ಕೆ ಹತ್ತಾರು ವರ್ಷಗಳ ಇತಿಹಾಸವಿದೆ. ಈ ಯತ್ನದ ಭಾಗವಾಗಿ ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಶ್ರೀಲಂಕಾಗಳನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಳ್ಳಲು ಭಾರತ ರಾಜತಾಂತ್ರಿಕ ಯತ್ನಗಳನ್ನು ಮುಂದುವರಿಸಿದೆ. ಕೆಲ ಸಮಯದಿಂದ ಚೀನಾ, ಭಾರತದ ಈ ನೆರೆಯ ರಾಷ್ಟ್ರಗಳ ಜೊತೆ ಸಖ್ಯ ಬೆಳೆಸಿಕೊಂಡಿತ್ತು.

ADVERTISEMENT
ಜಲಾಂತರ್ಗಾಮಿ (ಸಂಗ್ರಹ ಚಿತ್ರ)

ಐಎನ್‌ಎಸ್‌ ಸಿಂಧುವೀರ್

ಈ ಎಲ್ಲದರ ನಡುವೆ ಬಂಗಾಳಕೊಲ್ಲಿಯಲ್ಲಿ ಭಾರತದ ಪ್ರಭಾವ ವಿಸ್ತರಿಸುವ ಮತ್ತು ಚೀನಾದ ಪ್ರಭಾವ ನಿಯಂತ್ರಿಸುವ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮ್ಯಾನ್ಮಾರ್‌ ನೌಕಾಪಡೆಗೆ ಜಲಾಂತರ್ಗಾಮಿಯೊಂದನ್ನು ಕೊಡುಗೆಯಾಗಿ ನೀಡಲು ಭಾರತ ಸರ್ಕಾರ ನಿರ್ಧರಿಸಿದೆ. ಸ್ವತಃ ಜಲಾಂತರ್ಗಾಮಿ ಮತ್ತು ಯುದ್ಧನೌಕೆಗಳ ಕೊರತೆ ಎದುರಿಸುತ್ತಿರುವ ಭಾರತವು, ಒಂದು ವೇಳೆ ಈ ನಿರ್ಧಾರ ತೆಗೆದುಕೊಳ್ಳದಿದ್ದರೆ ಬಂಗಾಳಕೊಲ್ಲಿಯಲ್ಲಿ ಚೀನಾದ ಪ್ರಭಾವ ಇನ್ನಷ್ಟು ಹೆಚ್ಚುತ್ತಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ.

ಭಾರತೀಯ ನೌಕಾಪಡೆಯಲ್ಲಿ 1988ರಿಂದ ಸೇವೆಯಲ್ಲಿದ್ದ ಕಿಲೊ ಕ್ಲಾಸ್‌ ಜಲಾಂತರ್ಗಾಮಿ ಐಎನ್‌ಎಸ್ ಸಿಂಧುವೀರ್‌ ಅನ್ನು ಮ್ಯಾನ್ಮಾರ್‌ ನೌಕಾಪಡೆಗೆ ನೀಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಘೋಷಿಸಿದೆ. ವಿಶಾಖಪಟ್ಟಣಂನ ಹಿಂದುಸ್ತಾನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌ ಈ ಸಬ್‌ಮರೀನ್‌ಗೆ ಅಗತ್ಯ ರಿಪೇರಿ ಮಾಡಿ, ಕೆಲ ಬಿಡಿಭಾಗಗಳನ್ನು ಬದಲಿಸಿ, ಒಟ್ಟಾರೆ ಜಲಾಂತರ್ಗಾಮಿಯನ್ನು ನವೀಕರಿಸಿದೆ. ನವೀಕರಣದ ನಂತರ ಜಲಾಂತರ್ಗಾಮಿಯ ಸೇವಾ ಅವಧಿ ಸುಮಾರು 15 ವರ್ಷಗಳಷ್ಟು ಹೆಚ್ಚಾಗಿದೆ. ಈ ಜಲಾಂತರ್ಗಾಮಿಯು 2030ರವರೆಗೂ ಮ್ಯಾನ್ಮಾರ್‌ ನೌಕಾಪಡೆಯಲ್ಲಿ ಸೇವೆ ಸಲ್ಲಿಸಬಹುದು.

ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್‌ ವಿಕ್ರಮಾದಿತ್ಯ

ಬಾಂಗ್ಲಾ ಬಂದರುಗಳಲ್ಲಿ ಚೀನಾ ಯುದ್ಧನೌಕೆಗಳು

2017ರಲ್ಲಿ ಚೀನಾ, ಬಾಂಗ್ಲಾದೇಶಕ್ಕೆ ಎರಡು ಮಿಂಗ್‌ ಕ್ಲಾಸ್‌ ಜಲಾಂತರ್ಗಾಮಿಗಳನ್ನು 20 ಕೋಟಿ ಡಾಲರ್‌ಗೆ ಮಾರಾಟ ಮಾಡಿತ್ತು. ಈ ಜಲಾಂತರ್ಗಾಮಿಗಳ ನಿರ್ವಹಣೆ, ಸುಧಾರಣೆ ಮತ್ತು ಶಸ್ತ್ರಾಸ್ತ್ರಗಳಿಗಾಗಿ ಬಾಂಗ್ಲಾದೇಶವು ಚೀನಾ ನೌಕಾಪಡೆಯನ್ನು ಅವಲಂಬಿಸುವಂತೆ ಮಾಡಿತ್ತು. ನಂತರದ ದಿನಗಳಲ್ಲಿಯೂ ಬಾಂಗ್ಲಾದೇಶದ ನೌಕಾಪಡೆಯು ಚೀನಾದಿಂದ ಹಲವು ನೌಕಾ ಉಪಕರಣಗಳನ್ನು ಖರೀದಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯುದ್ಧನೌಕೆಗಳ ಖರೀದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ.

ಬಾಂಗ್ಲಾದೇಶದ ಕಾಕ್ಸ್‌ಬಜಾರ್‌ನಲ್ಲಿ ಚೀನಾ ಸರ್ಕಾರ ಸ್ವಾಮ್ಯದ ಕಂಪನಿಗಳು ಜಲಾಂತರ್ಗಾಮಿ ನೆಲೆ ನಿರ್ಮಿಸುವ ಗುತ್ತಿಗೆ ಪಡೆದುಕೊಂಡಿವೆ. ಹೀಗಾಗಿಯೇ ಬಾಂಗ್ಲಾದೇಶ ನೌಕಾಪಡೆಗೆ ಸಂಬಂಧಿಸಿದ ಹಲವು ಖರೀದಿ, ಗುತ್ತಿಗೆ ಒಪ್ಪಂದಗಳು ಚೀನಾ ಕಂಪನಿಗಳ ಪಾಲಾಗಿವೆ. ಬಾಂಗ್ಲಾದೇಶದಲ್ಲಿ ನಿರ್ಮಾಣವಾಗುತ್ತಿರುವ ಯುದ್ಧನೌಕೆಗಳ ವಿನ್ಯಾಸದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಚೀನಾದ ತಂತ್ರಜ್ಞರು, ಬಾಂಗ್ಲಾ ನೌಕಾಪಡೆಯ ಸುಧಾರಣೆಗೆ ಅಗತ್ಯ ಸಲಹೆಗಳನ್ನೂ ನೀಡುತ್ತಿದ್ದಾರೆ.

ಭಾರತೀಯ ನೌಕಾಪಡೆಯ ಯುದ್ಧನೌಕೆ

ವಿಶಾಖಪಟ್ಟಣದ ಸುರಕ್ಷೆ ಪ್ರಶ್ನೆ

ಬಾಂಗ್ಲಾದೇಶದ ನೌಕಾಪಡೆಯು ಚೀನಾ ಮೇಲೆ ತಂತ್ರಜ್ಞಾನ, ಶಸ್ತ್ರಾಸ್ತ್ರ ಮತ್ತು ಉಪಕರಣಗಳಿಗಾಗಿ ಅವಲಂಬಿತವಾಗಿರುವುದು ಭಾರತೀಯ ನೌಕಾಪಡೆಯ ಅತಿಮುಖ್ಯ ಘಟಕಗಳು ಇರುವ ವಿಶಾಖಪಟ್ಟಣದ ನೌಕಾನೆಲೆಗೆ ಆತಂಕಕಾರಿಯಾಗಿದೆ. ಪೂರ್ವ ತೀರದ ವಿಶಾಖಪಟ್ಟಣ ಸಮೀಪ ಭಾರತೀಯ ನೌಕಾಪಡೆಯು ನ್ಯೂಕ್ಲಿಯರ್ ಸಬ್‌ಮರೀನ್‌ ದಳವನ್ನು ರೂಪಿಸುತ್ತಿದೆ.

ಬಾಂಗ್ಲಾದೇಶ ನೌಕಾಪಡೆಯ ಜಲಾಂತರ್ಗಾಮಿ ನೆಲೆಯನ್ನು ಚೀನಾದ ಯುದ್ಧನೌಕೆಗಳು ಮತ್ತು ಸಬ್‌ಮರೀನ್‌ಗಳು ಮುಂದಿನ ದಿನಗಳಲ್ಲಿ ಇಂಧನ ಭರ್ತಿ ಮತ್ತು ರಿಪೇರಿಗಾಗಿ ಬಳಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಬಾಂಗ್ಲಾ ಸರ್ಕಾರವು 2016ರಲ್ಲಿ ಚೀನಾದ ಯುದ್ಧನೌಕೆಗಳನ್ನು ತನ್ನ ಬಂದರು ಮತ್ತು ನೆಲೆಗಳಲ್ಲಿ ಲಂಗರು ಹಾಕಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿತ್ತು. ಈ ಹೇಳಿಕೆ ಹೊರಬಿದ್ದ ಎರಡು ವಾರಗಳಲ್ಲಿ ಬಾಂಗ್ಲಾದ ಚಿತ್ತಂಗಾಂಗ್‌ ನೌಕಾನೆಲೆಯಲ್ಲಿ ಎರಡು ಚೀನಾದ ಕ್ಷಿಪಣಿವಾಹಕ ಯುದ್ಧನೌಕೆಗಳು ಲಂಗರು ಹಾಕಿದ್ದವು. ಬಾಂಗ್ಲಾ ನೌಕಾಪಡೆಯು ಚೀನಾ ನೌಕಾಪಡೆಯೊಂದಿಗೆ ಬಂಗಾಳ ಕೊಲ್ಲಿಯಲ್ಲಿ ಆಗಾಗ್ಗೆ ಸಮರಾಭ್ಯಾಸವನ್ನೂ ನಡೆಸುತ್ತದೆ.

ಭಾರತದ ಅನಿವಾರ್ಯತೆ

ಮ್ಯಾನ್ಮಾರ್‌ನ ನೌಕಾ ಅಗತ್ಯಗಳನ್ನು ತುಂಬಿಕೊಡಲು ಒಂದು ವೇಳೆ ಭಾರತವು ಸಮ್ಮತಿಸದಿದ್ದರೆ ಅದೂ ಸಹ ಬಾಂಗ್ಲಾದೇಶದ ಹಾದಿಯನ್ನೇ ತುಳಿಯುವ ಅಪಾಯವಿತ್ತು. ಕಾರ್ಯತಂತ್ರದ ದೃಷ್ಟಿಯಿಂದ ಇದು ಚೀನಾಕ್ಕೆ ಅನುಕೂಲಕಾರಿಯಾಗಿಯೂ, ಭಾರತಕ್ಕೆ ಅಪಾಯಕಾರಿಯಾಗಿಯೂ ಪರಿಣಮಿಸುತ್ತಿತ್ತು.

ಹಿಂದಿನಿಂದಲೂ ಭಾರತವು ಮ್ಯಾನ್ಮಾರ್‌ನೊಂದಿಗೆ ಸೌಹಾರ್ದ ಸಂಬಂಧ ಹೊಂದಿದೆ. ಈ ತಿಂಗಳ ಆರಂಭದಲ್ಲಿ ಭೂಸೇನಾ ಮುಖ್ಯಸ್ಥರಾದ ಜನರಲ್ ಮನೋಜ್ ಮುಕುಂದ್ ನರವಣೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಹರ್ಷ್‌ ಶ್ರಿಂಗ್ಲಾ ಮ್ಯಾನ್ಮಾರ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭ ಫಿರಂಗಿಗಳು, ಟಿ-72 ಟ್ಯಾಂಕ್‌ಗಳಿಗೆ ಬೇಕಾದ ಮದ್ದುಗುಂಡುಗಳು, ಯುದ್ಧನೌಕೆ ಮತ್ತು ಜಲಾಂತರ್ಗಾಮಿಗಳಿಗೆ ಬೇಕಾದ ಸೋನಾರ್ ಮತ್ತು ಟಾರ್ಪೆಡೊಗಳನ್ನು ಸರಬರಾಜು ಮಾಡಲು ಭಾರತ ಸರ್ಕಾರ ಒಪ್ಪಿಕೊಂಡಿತ್ತು.2017ರಲ್ಲಿ ಲಘು ಟಾರ್ಪೆಡೊಗಳನ್ನು ಸರಬರಾಜು ಮಾಡಿದ್ದನ್ನೂ ಇಲ್ಲಿ ಸ್ಮರಿಸಬಹುದು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.