ಹೈದರಾಬಾದ್: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರ ಬಂಧನವನ್ನು ಧಾರಾವಾಹಿ ಸರಣಿ ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಟೀಕಿಸಿದ್ದಾರೆ. ಅಲ್ಲದೇ ಮಗಳ ಬಂಧನದ ಬಗ್ಗೆ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೆಸಿಆರ್ ಈ ರಾಜಕೀಯ ನಾಟಕಗಳನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
'ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕುಟುಂಬ ಹಾಗೂ ಬಿಜೆಪಿಯ ನಾಟಕ ಧಾರಾವಾಹಿಯಂತೆ ಮೂಡಿಬಂದಿದೆ. ಕೆಲ ವರ್ಷಗಳಿಂದ ನಡೆಯುತ್ತಿದ್ದ ನಾಟಕ ನಿನ್ನೆ (ಶುಕ್ರವಾರ) ಬಂಧನದ ಬಳಿಕ ಪರಾಕಾಷ್ಠೆ ತಲುಪಿದೆ. ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಒಂದು ದಿನ ಮುಂಚಿತವಾಗಿ ಬಂಧನದ ನಾಟಕ ಏನನ್ನು ಸೂಚಿಸುತ್ತದೆ?. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಚಾಂಪಿಯನ್ ಆಗಿ ಹೊರಹೊಮ್ಮಲು ಬಯಸಿದರೆ, ಬಿಆರ್‌ಎಸ್ ಜನರ ಸಹಾನುಭೂತಿ ಪಡೆಯಲು ಯತ್ನಿಸಿದೆ. ಇಬ್ಬರೂ ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ' ಎಂದು ಸಿಎಂ ರೇವಂತ್ ರೆಡ್ಡಿ ಆರೋಪಿಸಿದರು.
ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಕೆಸಿಆರ್ ಅವರ ಪುತ್ರಿ, ಬಿಆರ್‌ಎಸ್ ನಾಯಕಿ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಹೈದರಾಬಾದ್‌ನಲ್ಲಿ ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.