ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಚರ್ಚೆಯನ್ನು ಅಣಕವಾಡಿರುವ ಕುರಿತಾದ ವಿವಾದಗಳ ನಡುವೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸಂಸತ್ತಿನ ಹೊರಗೆ ಸಂಸದರು ಕುಳಿತಿರುವ ವಿಡಿಯೊವನ್ನು ತಾವು ಚಿತ್ರೀಕರಿಸಿಕೊಂಡಿರುವುದಾಗಿಯೂ, ಅದಿನ್ನೂ ತನ್ನ ಫೋನ್‌ನಲ್ಲಿ ಇರುವುದಾಗಿಯೂ ಹೇಳಿದ್ದು, ಆದರೆ, ಸದನದಿಂದ ಸಂಸದರನ್ನು ‘ಹೊರಗೆ ಹಾಕಿರುವ’ ಕುರಿತು ಚರ್ಚೆ ಆಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.
ಉಭಯ ಸದನಗಳ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಸಂಸತ್ತಿನ ಮೆಟ್ಟಿಲುಗಳ ಮೇಲೆ ಪ್ರತಿಪಕ್ಷಗಳ ಸಂಸದರು ಮಂಗಳವಾರ ಪ್ರತಿಭಟನೆ ನಡೆಸಿದ್ದರು. ಈ ವೇಳೆ ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಜಗದೀಪ್ ಧನಕರ್ ಅವರನ್ನು ಅಣುಕಿಸಿದ್ದರು. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ವಿಡಿಯೊ ಮಾಡಿರುವುದರ ಕುರಿತು ಮತ್ತು ಉಪರಾಷ್ಟ್ರಪತಿಯನ್ನು ಅವಮಾನಿಸಿರುವುದರ ಕುರಿತು ಕೇಳಿದಾಗ, ‘ಯಾರು ಯಾರನ್ನು ಅವಮಾನಿಸಿದರು?’ ಸಂಸದರು ಅಲ್ಲಿ ಕುಳಿತಿದ್ದರು, ನಾನು ಅವರ ವಿಡಿಯೊ ಚಿತ್ರೀಕರಿಸಿದೆ. ಅದಿನ್ನೂ ನನ್ನ ಫೋನ್‌ನಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಟೀಕಿಸಿದ್ದಾರೆ. ಆದರೆ 150 ಸಂಸದರನ್ನು ಅಮಾನತುಗೊಳಿಸಿರುವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಅದಾನಿ ಹಾಗೂ ನಿರುದ್ಯೋಗದ ಬಗ್ಗೆಯೂ ಮಾತನಾಡಿಲ್ಲ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.