ಚಂಡೀಗಢ: ದುಡ್ಡಿನ ನೋಟುಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ಮುದ್ರಿಸಬಾರದೇಕೆ? ಎಂದು ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಪ್ರಶ್ನಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮುಂಬರುವ ದುಡ್ಡಿನ ನೋಟುಗಳ ಸರಣಿಯಲ್ಲಿ ಹಿಂದೂ ದೇವರುಗಳಾದ ಲಕ್ಷ್ಮೀದೇವಿ ಮತ್ತು ಗಣೇಶನನ್ನು ಮುದ್ರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಪ್ರತಿಪಕ್ಷಗಳಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಒಂದು ಬದಿಯಲ್ಲಿ ಮಹಾತ್ಮ ಗಾಂಧಿ ಅವರ ಚಿತ್ರ ಹಾಗೂ ಮತ್ತೊಂದು ಬದಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರವಿದ್ದರೆ ಹೇಗೆ. ಅಹಿಂಸೆ, ಸಂವಿಧಾನ ಮತ್ತು ಸಮತಾವಾದಗಳು ಒಟ್ಟಾಗಿ ಆಧುನಿಕ ಭಾರತವನ್ನು ಬಹಳ ಉತ್ತಮವಾಗಿ ಪ್ರತಿನಿಧಿಸುತ್ತವೆ ಎಂದು ತಿವಾರಿ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ನಿಟ್ಟಿನಲ್ಲಿ ಕೇಜ್ರಿವಾಲ್ ಅವರು ಬಿಜೆಪಿಗೆ ಹಿಂದೂತ್ವದ ಪೈಪೋಟಿ ನೀಡುತ್ತಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್‌ನ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ಅವರು ಟೀಕಿಸಿದ್ದಾರೆ.
ನಮ್ಮನ್ನು ದೇವರು ಆಶೀರ್ವಾದಿಸದಿದ್ದರೆ ನಾವು ಮಾಡುವ ಪ್ರಯತ್ನಗಳು ಸರಿಯಾದ ರೀತಿಯಲ್ಲಿ ಫಲಕೊಡುವುದಿಲ್ಲ. ನೋಟಿನ ಮೇಲೆ ಲಕ್ಷ್ಮಿದೇವಿ-ಗಣೇಶನ ಚಿತ್ರವಿದ್ದರೆ ನಮ್ಮ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.