ADVERTISEMENT

ಕೇರಳದಲ್ಲಿ ಭಾರಿ ಮಳೆ: ಜನಜೀವನದ ಮೇಲೆ ದುಷ್ಪರಿಣಾಮ

ಪಿಟಿಐ
Published 25 ಮೇ 2024, 15:48 IST
Last Updated 25 ಮೇ 2024, 15:48 IST
ತಿರುವನಂತಪುರದ ಶಂಖುಮುಖ ಕಡಲತೀರದಿಂದ ವಿಳಿಂಜಗೆ ತೆರಳುತ್ತಿದ್ದ ದೋಣಿಯೊಂದು ತಲೆಕೆಳಗಾದಾಗ ಮೀನುಗಾರರೊಬ್ಬರು ಸಮುದ್ರಕ್ಕೆ ಹಾರಿದರು. ಜೂನ್ 9ರ ಮಧ್ಯರಾತ್ರಿಯಿಂದ ಜುಲೈ 31ರವರೆಗೆ ಕೇರಳದ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ
–ಪಿಟಿಐ ಚಿತ್ರ
ತಿರುವನಂತಪುರದ ಶಂಖುಮುಖ ಕಡಲತೀರದಿಂದ ವಿಳಿಂಜಗೆ ತೆರಳುತ್ತಿದ್ದ ದೋಣಿಯೊಂದು ತಲೆಕೆಳಗಾದಾಗ ಮೀನುಗಾರರೊಬ್ಬರು ಸಮುದ್ರಕ್ಕೆ ಹಾರಿದರು. ಜೂನ್ 9ರ ಮಧ್ಯರಾತ್ರಿಯಿಂದ ಜುಲೈ 31ರವರೆಗೆ ಕೇರಳದ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ –ಪಿಟಿಐ ಚಿತ್ರ   

ತಿರುವನಂತಪುರ: ಕೇರಳದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ನೂರಾರು ಮನೆಗಳಿಗೆ ಹಾನಿಯಾಗಿದ್ದು, ರಸ್ತೆಗಳು ಜಲಾವೃತವಾಗಿವೆ. ಮರಗಳು ನೆಲಕ್ಕುರುಳಿದ್ದು, ಪ್ರವಾಹದ ನೀರು ಮನೆಗಳನ್ನು ಪ್ರವೇಶಿಸಿದೆ. ಧಾರಾಕಾರ ಮಳೆಯ ಕಾರಣ ರೈಲು ಸಂಚಾರದಲ್ಲಿ ತೊಡಕಾಗಿದೆ.

ಕರಾವಳಿಯ ಆಲಪ್ಪುಳ ಜಿಲ್ಲೆಯ ಕುಟ್ಟನಾಡಿನ ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳು, ಶಾಲೆಗಳು ಮತ್ತು ಅಂಗಡಿಗಳಿಗೆ ಪ್ರವಾಹದ ನೀರು ನುಗ್ಗಿ ಸಂಕಷ್ಟ ಎದುರಾಗಿದೆ. ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಸವಾರರು ವಾಹನಗಳನ್ನು ಚಲಿಸಲು ಹರಸಾಹಸ ಪಡುತ್ತಿದ್ದಾರೆ.

ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ ಮತ್ತು ಕೊಟಯಂ ಜಿಲ್ಲೆಗಳಲ್ಲಿ ಕೆಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. 

ADVERTISEMENT

ಕೊಲ್ಲಂ ಜಿಲ್ಲೆಯ ಕೈಕುಲಂಗರ ಎಂಬಲ್ಲಿ ಭಾರಿ ಮಳೆಗೆ ಮನೆಯ ಛಾವಣಿ ಕುಸಿದ ಪರಿಣಾಮ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕನ್ನೆಟ್ಟುಮುಕ್ಕಿಯಲ್ಲಿ ಮತ್ತೊಂದು ಮನೆ ಪೂರ್ಣವಾಗಿ ಹಾನಿಗೀಡಾಗಿದೆ. ಮನೆಯಲ್ಲಿದ್ದ ವೃದ್ಧೆಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಿರುವನಂತಪುರ ಜಿಲ್ಲೆಯಲ್ಲಿ ಅಂದಾಜು ₹ 1.82 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.