ಚೆನ್ನೈ: ತಮಿಳುನಾಡಿನ ಉದಕಮಂಡಳದ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಹೆಲಿಕಾಪ್ಟರ್ ಮೂಲಕ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವುತ್ ಅವರನ್ನು ಹೊತ್ತು ಸಾಗುತ್ತಿದ್ದಾಗ ಪತನಗೊಂಡು ಅಸುನೀಗಿದ ಭಾರತೀಯ ವಾಯುಸೇನೆಯ ಪೈಲಟ್ ಕುಲದೀಪ್ ಸಿಂಗ್ ಅವರ ಪತ್ನಿ ಈಗ ಸೇನೆ ಸೇರುವ ಮೂಲಕ ಪತಿಯ ಕನಸನ್ನು ನನಸಾಗಿಸಿದ್ದಾರೆ.
ಭಾರತೀಯ ವಾಯುಸೇನೆಯ ಪೈಲಟ್ ಆಗಿದ್ದ ಕುಲದೀಪ್ ಸಿಂಗ್ ಅವರು ಎಂಐ–17ವಿ5 ಮಲ್ಟಿ ರೋಲ್ ಹೆಲಿಕಾಪ್ಟರ್‌ನೊಂದಿಗೆ ಕೆಲಸ ಮಾಡುತ್ತಿದ್ದವರು. 2017ರಲ್ಲಿ ಸೇನೆ ಸೇರಿದ್ದ ಇವರು, ನಾಲ್ಕು ವರ್ಷಗಳ ನಂತರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವುತ್ ಅವರನ್ನು ಕರೆದೊಯ್ಯುವ ಅವಕಾಶ ಪಡೆದಿದ್ದರು. ಕೊಯಮತ್ತೂರಿನ ಸುಲೂರು ಬಳಿಯ ವಾಯುನೆಲೆಯಿಂದ ಜನರಲ್ ಹೊತ್ತ ಹೆಲಿಕಾಪ್ಟರ್, ಉದಕಮಂಡಳದ ವೆಲ್ಲಿಂಗ್ಟನ್‌ನಲ್ಲಿರುವ ಸೇನಾ ಸಿಬ್ಬಂದಿ ಕಾಲೇಜು ತಲುಪಬೇಕಿತ್ತು. ಆದರೆ ಅವಳಿ ಎಂಜಿನ್ ಹೊಂದಿದ್ದ ಹೆಲಿಕಾಪ್ಟರ್ ನೀಲಗಿರಿ ಕಾಡಿನಲ್ಲಿ ಪತನಗೊಂಡಿತು.
2021ರ ಡಿ. 8ರಂದು ಸಂಭವಿಸಿದ ಈ ಅಪಘಾತದಲ್ಲಿ ಮಡಿದ ಕುಲದೀಪ್ ಸಿಂಗ್ ಅವರ ಪತ್ನಿ ಯಶಸ್ವಿನಿ ಧಾಕಾ ಭವಿಷ್ಯದ ಕುರಿತೂ ಪ್ರಶ್ನೆಗಳು ಮೂಡಿದವು. ಆದರೆ ಪತಿಯಂತೆಯೇ ಆಲೀವ್ ಹಸಿರು ಬಣ್ಣದ ಸಮವಸ್ತ್ರ ತೊಡುವ ಸಂಕಲ್ಪ ಮಾಡಿದ್ದ ಇವರು, ಕಠಿಣ ಪರಿಶ್ರಮದೊಂದಿಗೆ ಸೇನೆ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ತಮ್ಮ ಸೇನೆಯ ಪರಿವಾರದ ಹೆಮ್ಮೆ ಹೆಚ್ಚಿಸಿದ್ದಾರೆ.
ಚೆನ್ನೈನ ಅಕಾಡೆಮಿಯಲ್ಲಿ ತರಬೇತಿ ಪಡೆದ ಅಧಿಕಾರಿಗಳ ನಿರ್ಗಮ ಪಥಸಂಚಲನದ ನಂತರ ಇಂಥ ಹಲವು ಪ್ರೇರಣಾದಾಯಕ ಚಿತ್ರಣಗಳು ಕಂಡುಬಂದವು.
ಶೌರ್ಯನ್ ಥಾಪಾ ಅವರು ತಮ್ಮ ಕುಟುಂಬದಿಂದ ಸೇನೆ ಸೇರಿದ 6ನೇ ತಲೆಮಾರಿನವರು. 21 ವರ್ಷದ ಈ ಯುವ ಸೇನಾನಿ, ಅಕಾಡೆಮಿಯಲ್ಲಿ ತರಬೇತಿ ಪಡೆದು, ನೇಮಕಗೊಂಡ 184 ಅಧಿಕಾರಿಗಳಲ್ಲಿ ಒಬ್ಬರು. ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಚಿನ್ನದ ಪದಕದೊಂದಿಗೆ ಪಾಸಾದ ಇವರು, ತಮ್ಮ ತಂದೆ ಕರ್ನಲ್ ಮೋಹಿತ್ ಥಾಪಾ ಅವರು ಸೇವೆ ಸಲ್ಲಿಸಿದ 7/8 ಗೂರ್ಖಾ ರೈಫಲ್ಸ್ ಸೇರಿದ್ದಾರೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಕೃಷಿ ಕುಟುಂಬದ ಎಂ. ಶರಣ್ಯ ಅವರು ತಮ್ಮ ಇಡೀ ಕುಟುಂಬದ ಮೊದಲ ಪದವೀಧರೆ. ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದ ಇವರು, ಸೇನಾ ತರಬೇತಿ ಕೇಂದ್ರ ಸೇರುವ ಮೂಲಕ ಈಗ ಕಮಿಷನ್ಡ್ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ.
ಸೇನಾಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ 21ರಿಂದ 27 ವರ್ಷದೊಳಗಿನವರು ಕಠಿಣ ತರಬೇತಿ ಪಡೆಯುತ್ತಾರೆ. ಹೀಗೆ ಪಡೆದವರ ನಿರ್ಗಮನ ಪಥಸಂಚಲನದ ನಂತರ ಯುವ ಅಧಿಕಾರಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇವರ ಸಂಭ್ರಮಕ್ಕೆ ಸೇನಾಧಿಕಾರಿಗಳೂ ತಡೆಯೊಡ್ಡಲಿಲ್ಲ. ಭಾರತೀಯ ವಾಯುಸೇನೆ ಮುಖ್ಯಸ್ಥ ವಿವೇಕ್ ರಾಮ ಚೌಧರಿ ಗೌರವ ವಂದನೆ ಸ್ವೀಕರಿಸಿ, ಉತ್ತಮ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.