ADVERTISEMENT

ಕಾಳ್ಗಿಚ್ಚು ನಿರ್ವಹಣೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 5:10 IST
Last Updated 3 ಮಾರ್ಚ್ 2023, 5:10 IST
ಕಾಳ್ಗಿಚ್ಚಿನ ಬಗೆಗಳು
ಕಾಳ್ಗಿಚ್ಚಿನ ಬಗೆಗಳು   

‘ಕಾಳ್ಗಿಚ್ಚು ಒಂದು ನೈಸರ್ಗಿಕ ಕ್ರಿಯೆ. ಕಾಡಿನ ನೆಲದಲ್ಲಿ ಸಂಗ್ರಹವಾಗಿರುವ ಎಲೆ, ಕಡ್ಡಿ–ಕೊಂಬೆ, ಉರುಳಿಬಿದ್ದ ಮರಗಳು, ಒಣಗಿದ ಹುಲ್ಲು–ಪೊದೆಗಳು ಕೊಳೆತು ಮಣ್ಣು ಸೇರಬೇಕು. ಈ ಕ್ರಿಯೆ ನಡೆಯಲು ವರ್ಷಾನುಗಟ್ಟಲೆ ಸಮಯ ಬೇಕು. ಈ ಎಲ್ಲಾ ಅರಣ್ಯ ತ್ಯಾಜ್ಯವು ಕೊಳೆತು, ಮಣ್ಣಿಗೆ ಮತ್ತೆ ಪೋಷಕಾಂಶಗಳು ಸೇರುವುದು ಕಾಡಿಗೆ ಅತ್ಯಗತ್ಯ.

ಈ ಕ್ರಿಯೆ ನಿಧಾನವಾದರೆ, ಕಾಡು ಅಷ್ಟರಮಟ್ಟಿಗೆ ಪೋಷಕಾಂಶಗಳ ಕೊರತೆ ಎದುರಿಸುತ್ತದೆ. ಆದರೆ, ಆಗಾಗ ಬೀಳುವ ಸಣ್ಣ ಮಟ್ಟದ ಕಾಳ್ಗಿಚ್ಚು ಈ ಕ್ರಿಯೆಯನ್ನು ತ್ವರಿತಗೊಳಿಸುತ್ತದೆ. ಹೀಗಾಗಿ ಕಾಡಿನ ಮೇಲ್ಮೈನಲ್ಲಿ ಅರಣ್ಯ ತ್ಯಾಜ್ಯದ ಸಂಗ್ರಹ ಮಿತಿಮೀರಿದಾಗ ಕಾಳ್ಗಿಚ್ಚು ಬೀಳುವುದು ಮತ್ತು ಅವು ಸುಟ್ಟು ಬೂದಿಯಾಗುವುದು ಕಾಡಿನ ಪುನಶ್ಚೇತನಕ್ಕೆ ಅತ್ಯಗತ್ಯವಾದ ಕ್ರಿಯೆ. ಆದರೆ, ತ್ಯಾಜ್ಯದ ಬದಲಿಗೆ ಇಡೀ ಕಾಡೇ ಸುಟ್ಟು ಹೋಗುವ ಮಟ್ಟಕ್ಕೆ ಕಾಳ್ಗಿಚ್ಚು ಹಬ್ಬಿದರೆ, ಅದು ವಿನಾಶಕಾರಿಯಾಗುತ್ತದೆ. ಕಾಳ್ಗಿಚ್ಚು ವಿನಾಶಕಾರಿಯಾಗಿ ಬದಲಾಗದಂತೆ ಎಚ್ಚರವಹಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸದೇ ಇರುವುದರಿಂದ ಹೆಚ್ಚಿನ ಕಾಳ್ಗಿಚ್ಚುಗಳು ವಿನಾಶಕಾರಿಯೇ ಆಗುತ್ತಿವೆ’ ಎನ್ನುತ್ತದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ‘ಕಾಳ್ಗಿಚ್ಚು ವಿಪತ್ತು ನಿರ್ವಹಣೆ’ ವರದಿ.

ಕರ್ನಾಟಕವೊಂದರಲ್ಲೇ ಐದು ವರ್ಷಗಳಲ್ಲಿ 38,000 ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶವು ಕಾಳ್ಗಿಚ್ಚಿನಲ್ಲಿ ಸುಟ್ಟು ಹೋಗಿದೆ ಎನ್ನುತ್ತವೆ ಸರ್ಕಾರದ ದತ್ತಾಂಶಗಳು. ಆದರೆ, ದೇಶದಲ್ಲಿ ಕಾಳ್ಗಿಚ್ಚು ನಿರ್ವಹಣೆಗೆ ಪ್ರತ್ಯೇಕವಾದ ವ್ಯವಸ್ಥೆಯೇ ಇಲ್ಲ ಎನ್ನುತ್ತದೆ ಈ ವರದಿ. ಥಾಯ್ಲೆಂಡ್‌, ಇಂಡೊನೇಷ್ಯಾಗಳಲ್ಲಿ ಕಾಳ್ಗಿಚ್ಚಿನ ಅವಘಡಗಳು ಯಥೇಚ್ಛ. ಹೀಗಾಗಿ ಅಲ್ಲಿನ ಸರ್ಕಾರಗಳು ಕಾಳ್ಗಿಚ್ಚು ನಿರ್ವಹಣೆಗೆ ಪ್ರತ್ಯೇಕ ಇಲಾಖೆ ಅಥವಾ ಪ್ರಾಧಿಕಾರವನ್ನೇ ರಚಿಸಿವೆ. ಆದರೆ, ಭಾರತದಲ್ಲಿ ಆ ಸ್ವರೂಪದ ವ್ಯವಸ್ಥೆ ಇಲ್ಲ. ಬದಲಿಗೆ ಇಲ್ಲಿ ಅರಣ್ಯ ಇಲಾಖೆಯೇ ಕಾಳ್ಗಿಚ್ಚು ನಿರ್ವಹಣೆಯ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ಆದರೆ ಬೇರೆ ದೇಶಗಳಲ್ಲಿನ ಕಾಳ್ಗಿಚ್ಚು ನಿರ್ವಹಣೆ ವಿಧಾನಗಳಿಗೂ, ಭಾರತದಲ್ಲಿ ಅನುಸರಿಸುವ ವಿಧಾನಗಳಿಗೂ ಅಜಗಜಾಂತರವಿದೆ.

ADVERTISEMENT

ಥಾಯ್ಲೆಂಡ್‌ ಮತ್ತು ಇಂಡೊನೇಷ್ಯಾದಲ್ಲಿ ಕಾಳ್ಗಿಚ್ಚು ನಿರ್ವಹಣೆಗೆ ವರ್ಷವಿಡೀ ಕೆಲಸ ಮಾಡಲಾಗುತ್ತದೆ. ವರ್ಷದ ಎಲ್ಲಾ ಕಾಲದಲ್ಲೂ ಅರಣ್ಯ ಪ್ರದೇಶದಲ್ಲಿನ ಮೇಲ್ಮೈ ಉಷ್ಣಾಂಶ, ಸಂಗ್ರಹವಾಗಿರುವ ತ್ಯಾಜ್ಯದ ಪ್ರಮಾಣದ ಮೇಲೆ ನಿಗಾ ಇರಿಸಲಾಗಿರುತ್ತದೆ. ತ್ಯಾಜ್ಯದ ಪ್ರಮಾಣ ಹೆಚ್ಚಿದಂತೆ ಮತ್ತು ಉಷ್ಣಾಂಶ ಹೆಚ್ಚಿದಂತೆ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ. ಹೀಗಾಗಿ ಅತಿಉಷ್ಣತೆಯ ಕಾಲದಲ್ಲೂ ಕಾಳ್ಗಿಚ್ಚು ಉಂಟಾಗದಂತೆ ಎಚ್ಚರವಹಿಸಲಾಗುತ್ತದೆ. ಬ್ರೆಜಿಲ್‌ ಮತ್ತು ಅಮೆರಿಕದಲ್ಲೂ ಇಂಥದ್ದೇ ವಿಧಾನವನ್ನು ಅನುಸರಿಸಲಾಗುತ್ತದೆ. ಇವುಗಳ ಜತೆಯಲ್ಲಿ ‘ಫೈರ್‌ಲೈನ್‌’ಗಳನ್ನು ನಿರ್ಮಿಸಲಾಗುತ್ತದೆ. ಫೈರ್‌ಲೈನ್‌ಗಳಲ್ಲಿ ಅರಣ್ಯ ತ್ಯಾಜ್ಯ ಸಂಗ್ರಹವಾಗುತ್ತಿದ್ದಂತೆಯೇ ಅದನ್ನು ಸುಡಲಾಗುತ್ತದೆ. ಆ ಮೂಲಕ ಅದನ್ನು ವಿಲೇವಾರಿ ಮಾಡಲಾಗುತ್ತದೆ. ವರ್ಷದ ಎಲ್ಲಾ ಕಾಲದಲ್ಲೂ ಫೈರ್‌ಲೈನ್‌ಗಳು ಸಿದ್ಧವಿರುವಂತೆ ನೋಡಿಕೊಳ್ಳಲಾಗುತ್ತದೆ. ಇದಲ್ಲದೆ, ಸ್ಥಳೀಯ ಜನರನ್ನು ಮತ್ತು ಅರಣ್ಯವಾಸಿಗಳನ್ನು ‘ಫೈರ್ ವಾಚರ್’ಗಳನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಕಾಡಿನಲ್ಲಿ ಎಲ್ಲೇ ಬೆಂಕಿ ಕಾಣಿಸಿಕೊಂಡರೂ, ಆ ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡುವ ಕೆಲಸವನ್ನು ಫೈರ್‌ ವಾಚರ್‌ಗಳು ಮಾಡುತ್ತಾರೆ. ಇದರಿಂದ ಬೆಂಕಿ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಅದನ್ನು ನಂದಿಸಲು ಸಾಧ್ಯವಾಗುತ್ತದೆ. ಆದರೆ ಭಾರತದಲ್ಲಿ ಈ ಸ್ವರೂಪದ ವ್ಯವಸ್ಥೆಯ ಕೊರತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬೇರೆ ದೇಶಗಳಲ್ಲಿ ಕಾಳ್ಗಿಚ್ಚು ನಿರ್ವಹಣೆ ಎಂಬುದು ಮುನ್ನೆಚ್ಚರಿಕಾ ಸ್ವರೂಪದ್ದಾಗಿದ್ದರೆ, ಭಾರತದಲ್ಲಿ ಕಾಳ್ಗಿಚ್ಚು ನಿರ್ವಹಣೆ ಎಂಬುದು ಪ್ರತಿಸ್ಪಂದನಾ ಸ್ವರೂಪದ್ದು. ಬೇರೆ ದೇಶಗಳಲ್ಲಿ ಕಾಳ್ಗಿಚ್ಚು ಉಂಟಾಗದಂತೆ ನೋಡಿಕೊಳ್ಳಲೇ ಆದ್ಯತೆ ನೀಡಲಾಗುತ್ತದೆ. ಆದರೆ, ಭಾರತದಲ್ಲಿ ಕಾಡಿಗೆ ಬೆಂಕಿ ಬಿದ್ದ ನಂತರ ಅದನ್ನು ಆರಿಸಲು ಆದ್ಯತೆ ನೀಡಲಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೇ ಕಾಳ್ಗಿಚ್ಚು ನಿರ್ವಹಣೆಯ ಮುಂದಾಳುಗಳು. ಭಾರತದಲ್ಲೂ ಕಾಳ್ಗಿಚ್ಚು ತಡೆಯಲು ಕ್ರಮ ತೆಗೆದುಕೊಳ್ಳಲಾಗುತ್ತದೆಯಾದರೂ, ಅದು ‘ಫೈರ್‌ಲೈನ್‌’ ನಿರ್ವಹಣೆಗೇ ಸೀಮಿತವಾಗಿದೆ. ಕಾಡಿಗೆ ಬೆಂಕಿ ಬಿದ್ದ ನಂತರ ಅರಣ್ಯ ರಕ್ಷಕರು ಮತ್ತು ಅಧಿಕಾರಿಗಳು ಸೊಪ್ಪು ಹಿಡಿದು, ಬೆಂಕಿ ನಂದಿಸಲು ಮುಂದಾಗುತ್ತಾರೆ. ಹೀಗಾಗಿಯೇ ಕಾಳ್ಗಿಚ್ಚು ನಿಯಂತ್ರಣ ಭಾರತದಲ್ಲಿ ಪರಿಣಾಮಕಾರಿಯಾಗಿಲ್ಲ ಮತ್ತು ಅಂತಹ ಕಾರ್ಯಾಚರಣೆಗಳಲ್ಲಿ ಸಿಬ್ಬಂದಿ ಬೆಂಕಿಗೆ ಆಹುತಿಯಾಗುತ್ತಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಭಾರತದಲ್ಲಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಪ್ರತ್ಯೇಕ ಸಾಂಸ್ಥಿಕ ವ್ಯವಸ್ಥೆ, ಅನುದಾನ, ಸಿಬ್ಬಂದಿ ಇಲ್ಲ ಎಂಬುದರತ್ತ ಈ ವರದಿ ಬೊಟ್ಟು ಮಾಡಿದೆ. ಕರ್ನಾಟಕದಲ್ಲಿ ಈಚಿನ ಕಾಳ್ಗಿಚ್ಚು ಪ್ರಕರಣಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾಳ್ಗಿಚ್ಚಿಗೆ ಬಲಿಯಾದ ಅವಘಡಗಳು, ಇಂತಹ ವ್ಯವಸ್ಥೆಯ ಅವಶ್ಯಕತೆಯನ್ನು ಒತ್ತಿ ಹೇಳುತ್ತವೆ.

ಜಾರಿಯಾಗದ ಶಿಫಾರಸುಗಳು

ಕಾಳ್ಗಿಚ್ಚು ನಿಯಂತ್ರಣಕ್ಕೆ ಒಂದು ವ್ಯವಸ್ಥಿತ ಪ್ರಾಧಿಕಾರವನ್ನು ರಚಿಸಬೇಕು ಎಂದು ಈ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಅದರ ಜತೆಯಲ್ಲೇ ರಾಷ್ಟ್ರೀಯ ಅರಣ್ಯ ಕಾರ್ಯಯೋಜನೆ ಮತ್ತು ರಾಜ್ಯಗಳ ಜಂಟಿ ಅರಣ್ಯ ನಿರ್ವಹಣಾ ಕಾರ್ಯಯೋಜನೆ ಒಳಗೆ ಕಾಳ್ಗಿಚ್ಚು ನಿರ್ವಹಣಾ ನೀತಿಗಳನ್ನು ಒಳಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಆದರೆ, ಇವುಗಳಲ್ಲಿ ಬಹುತೇಕ ಶಿಫಾರಸುಗಳು ಜಾರಿಯಾಗಿಲ್ಲ

l ಕಾಳ್ಗಿಚ್ಚಿನ ಅಪಾಯವಿರುವ ಅರಣ್ಯ ಪ್ರದೇಶಗಳಲ್ಲಿ ‘ಫೈರ್‌ ವಾಚರ್‌’ಗಳನ್ನು ನೇಮಕ ಮಾಡಿಕೊಳ್ಳಬೇಕು. ಕಾಳ್ಗಿಚ್ಚುಕಾಣಿಸಿಕೊಳ್ಳುವ ಅಪಾಯ ಹೆಚ್ಚು ಇರುವ ಮಾರ್ಚ್‌, ಏಪ್ರಿಲ್‌, ಮೇ ಮತ್ತು ಜೂನ್‌ ತಿಂಗಳಲ್ಲಿ ಹೆಚ್ಚು ನಿಗಾ ಇರಿಸಬೇಕು. ಸಂಪರ್ಕಕ್ಕೆ ಅತ್ಯಾಧುನಿಕ ಸಾಧನಗಳನ್ನು ಬಳಸಬೇಕು

l ‘ಫೈರ್‌ಲೈನ್‌’ಗಳನ್ನು ವರ್ಷದ ಎಲ್ಲಾ ಋತುಗಳಲ್ಲೂ ನಿರ್ವಹಣೆ ಮಾಡಬೇಕು. ದಾಖಲೆಗಳ ಪ್ರಕಾರ ಫೈರ್‌ಲೈನ್‌ಗಳ ನಿರ್ವಹಣೆಗೆ ಸರ್ಕಾರವು ಅನುದಾನವನ್ನು ನೀಡುತ್ತಿಲ್ಲ. ಈ ಕಾರಣದಿಂದಲೇ ‘ಫೈರ್‌ಲೈನ್‌‘ಗಳ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾಳ್ಗಿಚ್ಚು ಹೊತ್ತಿಕೊಂಡಾಗ ಅದರ ನಿಯಂತ್ರಣ ಕಷ್ಟವಾಗುತ್ತಿದೆ

l ಅರಣ್ಯ ಪ್ರದೇಶಗಳಲ್ಲಿ ಅರಣ್ಯ ತ್ಯಾಜ್ಯದ ಸಂಗ್ರಹ ಹೆಚ್ಚಾದಾಗ, ಅದನ್ನು ಸುಡುವ ಕ್ರಮ ತೆಗೆದುಕೊಳ್ಳಬೇಕು. ಮೇಲ್ಮೈನಲ್ಲಿ ಇರುವ ಎಲೆ, ಕಟ್ಟಿಗೆ, ಒಣಗಿದ ಮರಗಳನ್ನು ಚಳಿಗಾಲದ ಆರಂಭದಲ್ಲೇ ಸುಡಬೇಕು. ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗುವ ಮುನ್ನವೇ ಈ ತ್ಯಾಜ್ಯವನ್ನು ಸುಡಬೇಕು. ಇದರಿಂದ ಕಾಳ್ಗಿಚ್ಚು ಹೊತ್ತಿಕೊಳ್ಳುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಆದರೆ, ಇದಕ್ಕೆ ಅರಣ್ಯ ಪ್ರದೇಶ, ಕಾಳ್ಗಿಚ್ಚಿಗೆ ಸಂಬಂಧಿಸಿದ ದತ್ತಾಂಶ ಮತ್ತು ಅರಣ್ಯದಲ್ಲಿರುವ ತ್ಯಾಜ್ಯದ ಸ್ವರೂಪ ಮತ್ತು ಪ್ರಮಾಣದ ದತ್ತಾಂಶ ಲಭ್ಯವಿರಬೇಕು. ಈ ದತ್ತಾಂಶ ಸಂಗ್ರಹ ಕೆಲಸ ಮೊದಲ ಹಂತದಲ್ಲಿ ನಡೆಯಬೇಕು. ಆನಂತರ ತ್ಯಾಜ್ಯ ಸುಡುವ ಕ್ರಮಗಳನ್ನು ವೈಜ್ಞಾನಿಕ ವಿಧಾನಗಳ ಮೂಲಕ ನಡೆಸಬೇಕು. ಇದರಿಂದ ಕಾಡಿನ ಪುನಶ್ಚೇತನವೂ ಆಗುತ್ತದೆ ಮತ್ತು ಕಾಳ್ಗಿಚ್ಚಿನ ಅಪಾಯವೂ ಕಡಿಮೆಯಾಗುತ್ತದೆ

l ಕಾಳ್ಗಿಚ್ಚು ಹೊತ್ತಿಕೊಂಡಾಗ ಅದನ್ನು ನಿಯಂತ್ರಿಸಲು ಅಗತ್ಯವಿರುವ ಸಾಧನಗಳ ಕೊರತೆ ಭಾರತದಲ್ಲಿ ತೀವ್ರವಾಗಿದೆ. ಅಗತ್ಯವಿರುವ ಬೆಂಕಿ ನಂದಕಗಳು, ಅತ್ಯಾಧುನಿಕ ವಾಹನಗಳು, ಟ್ಯಾಂಕರ್‌ ಹೆಲಿಕಾಪ್ಟರ್‌ಗಳ ಅವಶ್ಯಕತೆ ಇದೆ. ಇದಕ್ಕಾಗಿ ಸರ್ಕಾರವು ಅನುದಾನವನ್ನು ತೆಗೆದಿರಿಸಬೇಕು

l ಕಾಳ್ಗಿಚ್ಚು ನಿಯಂತ್ರಣಕ್ಕೆ ಮುಂದಾಗುವ ಸಿಬ್ಬಂದಿಗೆ ರಕ್ಷಣಾ ಕವಚ, ಇತರ ಸಾಧನಗಳ ಲಭ್ಯತೆ ಭಾರತದಲ್ಲಿ ಇಲ್ಲ. ಬೆಂಕಿ ನಿರೋಧಕ ಸಮವಸ್ತ್ರಗಳು, ಆಮ್ಲಜನಕ ಸಿಲಿಂಡರ್‌ಗಳನ್ನು ಈ ಸಿಬ್ಬಂದಿಗೆ ನೀಡಬೇಕು. ಬಳಕೆ ಬಗ್ಗೆ ತರಬೇತಿ ನೀಡಬೇಕು. ಕಾಳ್ಗಿಚ್ಚು ನಂದಿಸುವ ಬಗ್ಗೆಯೂ ತರಬೇತಿ ನೀಡಬೇಕು

5 ವರ್ಷಗಳಲ್ಲಿ 38 ಸಾವಿರ ಹೆಕ್ಟೇರ್‌ ಅರಣ್ಯ ಬೆಂಕಿಗಾಹುತಿ

ಐದು ವರ್ಷಗಳಲ್ಲಿ ಕರ್ನಾಟಕದ ಸುಮಾರು 38 ಸಾವಿರ ಹೆಕ್ಟೇರ್‌ನಷ್ಟು ಅರಣ್ಯವು ಕಾಳ್ಗಿಚ್ಚಿಗೆ ಆಹುತಿಯಾಗಿದೆ ಎಂದು ‘ಐಸೆಕ್’ ವರದಿ ತಿಳಿಸಿದೆ. ಅರಣ್ಯ ನಾಶದಿಂದ ಉಂಟಾಗುವ ಆರ್ಥಿಕ ನಷ್ಟದ ಕುರಿತು 2022ರ ಅಕ್ಟೋಬರ್‌ನಲ್ಲಿ ಸಿದ್ಧಪಡಿಸಿದ ವರದಿಯು ಅರಣ್ಯನಾಶದಿಂದ ಸ್ಥಳೀಯ ಸಮುದಾಯಗಳು ಹಾಗೂ ಆರ್ಥಿಕತೆಗೆ ಆಗಿರುವ ನಷ್ಟದ ಬಗ್ಗೆ ಚರ್ಚಿಸಿದೆ.

2016–17ರಿಂದ 2020–21ರ ಅವಧಿಯಲ್ಲಿ ಪ್ರತೀ ವರ್ಷವೂ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಈ ಪೈಕಿ, 2019–20ರಲ್ಲಿ ಅತ್ಯಧಿಕ ಪ್ರಮಾಣದ ಅರಣ್ಯ ಸುಟ್ಟುಹೋಗಿದೆ. ಸುಮಾರು 17,900 ಹೆಕ್ಟೇರ್ ಅರಣ್ಯವು ಅಗ್ನಿಗಾಹುತಿಯಾಗಿದೆ. 2019–20ರಲ್ಲಿ, ರಾಜ್ಯದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿಹೆಚ್ಚಿನ ಪ್ರಮಾಣದ ಅರಣ್ಯವು ಬೆಂಕಿಯಿಂದ ನಾಶವಾಗಿದೆ.

ಅಗಾಧ ಪ್ರಮಾಣದ ಅರಣ್ಯವು ಬೆಂಕಿಗೆ ಆಹುತಿಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವರದಿ, ಅಮೆರಿಕ ಮೊದಲಾದ ದೇಶಗಳಲ್ಲಿ ಕಾಳ್ಗಿಚ್ಚು ನಿರ್ವಹಣೆಗೆ ತೆಗೆದುಕೊಂಡಿರುವ ತಂತ್ರಜ್ಞಾನ ಆಧಾರಿತ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದೆ. ರೊಬೊಟ್‌ಗಳ ಸಹಾಯದಿಂದ ಕಾಳ್ಗಿಚ್ಚು ನಂದಿಸುವಂತಹ ತಂತ್ರಜ್ಞಾನ ಅಳವಡಿಕೆ, ಕಾಳ್ಗಿಚ್ಚಿನ ಮೇಲೆ ನಿಗಾ ವಹಿಸುವುದು, ಹೆಚ್ಚಿನ ಹಣಕಾಸು ಸಂಪನ್ಮೂಲ ಒದಗಿಸುವ ಪ್ರಯತ್ನಗಳು ಚುರುಕಾಗಿ ಆಗಬೇಕು ಎಂದು ಅಭಿಪ್ರಾಯಪಟ್ಟಿದೆ.

2022ರಲ್ಲಿ ಕಾಳ್ಗಿಚ್ಚಿನ 2,323 ಪ್ರಕರಣಗಳು ವರದಿಯಾಗಿದ್ದವು. ಇವುಗಳಲ್ಲಿ ಜನವರಿ ಹಾಗೂ ಫೆಬ್ರುವರಿ ತಿಂಗಳಲ್ಲೇ 2,262 ಪ್ರಕರಣಗಳು ವರದಿಯಾಗಿದ್ದವು.

ಕಾಳ್ಗಿಚ್ಚು ಪಸರಿಸುವಿಕೆ ತಡೆಯುವ ಫೈರ್‌ ಲೈನ್

ಅರಣ್ಯದಲ್ಲಿ ಬೆಂಕಿಯು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹರಡುವುದನ್ನು ತಡೆಯುವ ಉದ್ದೇಶದಿಂದ ‘ಫೈರ್ ಲೈನ್’ ನಿರ್ಮಿಸುವ ಪದ್ಧತಿಯಿದೆ. ರಸ್ತೆ ಮಾದರಿಯ ಈ ಫೈರ್‌ ಲೈನ್‌ನಲ್ಲಿ ಯಾವುದೇ ಗಿಡ, ಮರ, ಬಳ್ಳಿ ಅಥವಾ ಕಸಕಡ್ಡಿಯೂ ಬೀಳದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಬೆಂಕಿ ಹೊತ್ತಿಕೊಂಡರೆ, ಫೈರ್‌ಲೈನ್‌ನತ್ತ ಬರುತ್ತಿದ್ದಂತೆಯೇ ಅದು ನಂದಿ ಹೋಗುತ್ತದೆ. ಫೈರ್‌ಲೈನ್‌ ಮತ್ತೊಂದು ಬದಿಯಲ್ಲಿರುವ ಅರಣ್ಯವು ಕಾಳ್ಗಿಚ್ಚಿಗೆ ಬಲಿಯಾಗುವ ಆತಂಕ ತಪ್ಪುತ್ತದೆ. ಈ ಫೈರ್‌ ಲೈನ್‌ ಅನ್ನು ನಿರಂತರವಾಗಿ ನಿರ್ವಹಣೆ ಮಾಡಲಾಗುತ್ತದೆ. ಇದರ ನಿರ್ವಹಣೆಗೆಂದೇ ಸರ್ಕಾರವು ಒಂದಿಷ್ಟು ಮೊತ್ತವನ್ನು ಬಿಡುಗಡೆ ಮಾಡುತ್ತದೆ. 2021–22ರಲ್ಲಿ 4 ಕಿಲೋಮೀಟರ್ ಫೈರ್‌ಲೈನ್ ಅನ್ನು ಹೊಸದಾಗಿ ನಿರ್ಮಿಸಲಾಗಿದೆ. ಇದೇ ಸಾಲಿನಲ್ಲಿ ಒಟ್ಟು 1,424 ಕಿಲೋಮೀಟರ್ ಉದ್ದದಷ್ಟು ಫೈರ್‌ಲೈನ್ ನಿರ್ವಹಣೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಆಧಾರ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ‘ಕಾಳ್ಗಿಚ್ಚು ವಿಪತ್ತು ನಿರ್ವಹಣೆ’ ವರದಿ, ಕರ್ನಾಟಕ ಅರಣ್ಯ ಇಲಾಖೆ, ಐಸೆಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.