ADVERTISEMENT

ತಮಿಳುನಾಡು ಸರ್ಕಾರ ಉಳಿಯಲಿದೆಯೇ?

ಇ.ಟಿ.ಬಿ ಶಿವಪ್ರಿಯನ್‌
Published 22 ಮೇ 2019, 18:28 IST
Last Updated 22 ಮೇ 2019, 18:28 IST
ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ
ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ   

ಚೆನ್ನೈ:ತಮಿಳುನಾಡು ರಾಜ್ಯ ಸರ್ಕಾರದ ಭವಿಷ್ಯ ಅತಂತ್ರವಾಗಲಿದೆಯೇ?... ಇಂಥದ್ದೊಂದು ಪ್ರಶ್ನೆ ಈಗ ಚಲಾವಣೆಗೆ ಬಂದಿದೆ. ರಾಜ್ಯದ 22 ವಿಧಾನಸಭಾ ಕ್ಷೇತ್ರಗಳಿಗೆ ನಡೆದಿರುವ ಉಪಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾದ ನಂತರ ಈ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆ ಇದೆ.

234 ಸ್ಥಾನಗಳಿರುವ ತಮಿಳುನಾಡು ವಿಧಾನಸಭೆಯಲ್ಲಿ ಈಗ 22 ಸ್ಥಾನಗಳು ತೆರವಾಗಿವೆ. ಇದರಿಂದ ವಿಧಾನಸಭೆಯ ಸದಸ್ಯರ ಸಂಖ್ಯೆ 212ಕ್ಕೆ ಕುಸಿದಿದೆ. ಆದರೆ ಅಧಿಕಾರದಲ್ಲಿರುವ ಎಐಎಡಿಎಂಕೆ 114 ಸ್ಥಾನಗಳನ್ನು ಹೊಂದಿದೆ. ಫಲಿತಾಂಶ ಪ್ರಕಟವಾದ ನಂತರ ವಿಧಾನಸಭೆ ಸದಸ್ಯರ ಸಂಖ್ಯೆ 234ಕ್ಕೆ ಏರಿಕೆಯಾಗಲಿದೆ. ಆಗ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ. ಹೀಗಾಗಿ ಸರ್ಕಾರದ ಭವಿಷ್ಯವು ಫಲಿತಾಂಶದ ಮೇಲೆ ನಿಂತಿದೆ.

ಫಲಿತಾಂಶ ಪ್ರಕಟವಾದ ನಂತರ ಸರ್ಕಾರ ಉಳಿಯುತ್ತದೆಯೇ ಅಥವಾ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆಯೇ ಎಂಬುದು ಈಗ ಕುತೂಹಲದ ವಿಚಾರ. ಫಲಿತಾಂಶದ ನಂತರ ಏನೆಲ್ಲಾ ಅಗಬಹುದು ಎಂಬುದರ ವಿವರ ಹೀಗಿದೆ.

ADVERTISEMENT

ಸಾಧ್ಯತೆ 1

ಸರ್ಕಾರ ಉಳಿಸಿಕೊಳ್ಳಲು ಎಐಎಡಿಎಂಕೆ 8 ಸ್ಥಾನಗಳನ್ನಾದರೂ ಗೆಲ್ಲಬೇಕು. ಏಕೆಂದರೆ ಈಗಿನ 114 ಶಾಸಕರಲ್ಲಿ ಮೂವರು ಈಗಾಗಲೇ ಬಹಿರಂಗವಾಗಿ ಟಿ.ಟಿ.ವಿ. ದಿನಕರನ್ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಇನ್ನೊಬ್ಬ ಶಾಸಕರು ಪಕ್ಷವನ್ನು ತೊರೆದು ಡಿಎಂಕೆಗೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಐದು ಸ್ಥಾನಗಳನ್ನು ಗೆದ್ದರೂ ಸರ್ಕಾರ ಉಳಿಯುವ ಸಾಧ್ಯತೆ ಕಡಿಮೆ. ಹೀಗಾಗಿ ಎಂಟು ಸ್ಥಾನಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಎಐಎಡಿಎಂಕೆ ಇದೆ.

ಸಾಧ್ಯತೆ 2

ವಿರೋಧ ಪಕ್ಷವಾಗಿರುವ ಡಿಎಂಕೆಯು ಈಗ 97 ಶಾಸಕರನ್ನು ಹೊಂದಿದೆ.22ರಲ್ಲಿ 21 ಸ್ಥಾನಗಳನ್ನು ಗೆದ್ದರೆ ಡಿಎಂಕೆಯು ನಿರಾಯಾಸವಾಗಿ ಸರ್ಕಾರ ರಚಿಸಬಹುದು. ಆದರೆ ಈ ಸಾಧ್ಯತೆ ಅತ್ಯಂತ ಕಡಿಮೆ.

ಸಾಧ್ಯತೆ 3

ಡಿಎಂಕೆಯು 15ಕ್ಕಿಂತ ಹೆಚ್ಚು ಮತ್ತು 21ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆದ್ದರೆ ಟಿ.ಟಿ.ವಿ.ದಿನಕರನ್ ಅವರಿಗೆ ಬೆಂಬಲ ನೀಡಿ, ಸರ್ಕಾರ ರಚನೆಯಲ್ಲಿ ಪಾಲ್ಗೊಳ್ಳಬಹುದು.

ಸಾಧ್ಯತೆ 4

ಟಿ.ಟಿ.ವಿ. ದಿನಕರನ್ ಜತೆಗಾರರು (ಅವರ ಪಕ್ಷ ಇನ್ನೂ ನೋಂದಣಿ ಆಗಿಲ್ಲ) ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದರೆ, ಅವರನ್ನು ಸೆಳೆಯಲು ಎಐಎಡಿಎಂಕೆ ಪ್ರಯತ್ನಿಸುವ ಸಾಧ್ಯತೆ ಹೆಚ್ಚು. ಈಗ ಅವರು ನೋಂದಣಿ ಆಗಿರದ ಪಕ್ಷದವರಾಗಿರುವುದರಿಂದ ಅವರು ಯಾವುದೇ ಪಕ್ಷಕ್ಕೆ ಹೋಗಬಹುದು. ಅವರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಹೇರಲು ಸಾಧ್ಯವಿಲ್ಲ. ಈ ಶಾಸಕರನ್ನು ಸೆಳೆಯಲು ಎಐಎಡಿಎಂಕೆ ಯಶಸ್ವಿಯಾದರೆ, ಸರ್ಕಾರ ಉಳಿಯುವ ಸಾಧ್ಯತೆ ಇದೆ.

ಮತಗಟ್ಟೆ ಸಮೀಕ್ಷೆ

22ರಲ್ಲಿ 14 ಕ್ಷೇತ್ರಗಳಲ್ಲಿ ಡಿಎಂಕೆ, 3ರಲ್ಲಿ ಎಐಎಡಿಎಂಕೆ ಮತ್ತು ಉಳಿದ 5ರಲ್ಲಿ ಟಿ.ಟಿ.ವಿ. ದಿನಕರನ್ ಜತೆಗಾರರು ಗೆಲುವು ಸಾಧಿಸಲಿದ್ದಾರೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.