ಪುಣೆ: ಅಗತ್ಯವೆನಿಸಿದರೆ ಪುಣೆಯಲ್ಲಿ ಮಳೆ ಸಂತ್ರಸ್ತರನ್ನು ವಾಯು ಮಾರ್ಗದ ಮೂಲಕ ಸ್ಥಳಾಂತರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.
ಪುಣೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನೂರಾರು ಮನೆಗಳಿಗೆ ನೀರು ನುಗ್ಗಿದೆ. ಮಳೆ ಸಂಬಂಧಿತ ಅವಘಡಗಳಿಂದಾಗಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ
ಪುಣೆ ಜಿಲ್ಲಾಧಿಕಾರಿ, ಪಾಲಿಕೆ ಅಧಿಕಾರಿಗಳು ಹಾಗೂ ನೆರೆಯ ಪಿಂಪ್ರಿ ಚಿಂಚ್ವಾಡ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿರುವ ಶಿಂದೆ, ಸ್ಥಳಾಂತರ ಕಾರ್ಯಗಳಿಗೆ ನೆರವಾಗುವಂತೆ ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ (ಎನ್‌ಡಿಆರ್‌ಎಫ್) ಮನವಿ ಮಾಡಿದ್ದಾರೆ.
'ಅಗತ್ಯಬಿದ್ದರೆ ಜನರನ್ನು ವಾಯು ಮಾರ್ಗವಾಗಿ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಚಿಂತಿಸುವ ಅಗತ್ಯವಿಲ್ಲ' ಎಂದು ಶಿಂದೆ ಹೇಳಿದ್ದಾರೆ.
ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಯಾರೊಬ್ಬರೂ ಪ್ರಾಣ ಕಳೆದುಕೊಳ್ಳದಂತೆ ಎಚ್ಚರ ವಹಿಸಬೇಕು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿಯೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.