ADVERTISEMENT

ಮೋದಿ 'ಈ' ಕೆಲಸ ಮಾಡಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: AAP ನಾಯಕ ಕೇಜ್ರಿವಾಲ್

ಪಿಟಿಐ
Published 6 ಅಕ್ಟೋಬರ್ 2024, 9:11 IST
Last Updated 6 ಅಕ್ಟೋಬರ್ 2024, 9:11 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಹಾಗೂ&nbsp;ಎಎಪಿ ನಾಯಕ ಅರವಿಂದ ಕೇಜ್ರಿವಾಲ್</p></div>

ಪ್ರಧಾನಿ ನರೇಂದ್ರ ಮೋದಿ ಹಾಗೂ ಎಎಪಿ ನಾಯಕ ಅರವಿಂದ ಕೇಜ್ರಿವಾಲ್

   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿರುವ ರಾಜ್ಯಗಳಿಗೆ ಉಚಿತ ವಿದ್ಯುತ್ ಘೋಷಣೆ ಮಾಡಿದರೆ, ದೆಹಲಿ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಭಾನುವಾರ ಹೇಳಿದ್ದಾರೆ.

'ಜನತಾ ಕಿ ಅದಾಲತ್‌' ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್‌, ಡಬಲ್‌ ಎಂಜಿನ್‌ ಸರ್ಕಾರ ಎಲ್ಲ ರಾಜ್ಯಗಳಲ್ಲಿಯೂ ವಿಫಲವಾಗಿದೆ. ಹರಿಯಾಣ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಇತ್ತೀಚೆಗೆ ವಿಧಾನಸಭೆ ಚುನಾವಣೆ ನಡೆದಿದ್ದು, ಎರಡೂ ಕಡೆ ಬಿಜೆಪಿ ಹೊರಬೀಳುವ ಸೂಚನೆ ಸಿಕ್ಕಿದೆ ಎಂದು ಕುಟುಕಿದ್ದಾರೆ.

ADVERTISEMENT

ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿರುವ 'ಡಬಲ್‌ ಎಂಜಿನ್‌' ಮಾದರಿಯನ್ನು 'ಡಬಲ್ ಲೂಟಿ ಮತ್ತು ಡಬಲ್‌ ಭ್ರಷ್ಟಾಚಾರ' ಮಾದರಿ ಎಂದು ಕರೆದಿದ್ದಾರೆ.

'ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿರುವ 22 ರಾಜ್ಯಗಳಿಗೆ ದೆಹಲಿ ವಿಧಾನಸಭೆಗೆ ಫೆಬ್ರುವರಿ ನಡೆಯಲಿರುವ ಚುನಾವಣೆಗೂ ಮುನ್ನ ಉಚಿತ ವಿದ್ಯುತ್‌ ಘೋಷಿಸುವಂತೆ ಮೋದಿಗೆ ಸವಾಲು ಹಾಕುತ್ತೇನೆ. ಅವರು ಅದನ್ನು ಮಾಡಿದರೆ, ನಾನು ಬಿಜೆಪಿ ಪರ ಪ್ರಚಾರ ಮಾಡುತ್ತೇನೆ' ಎಂದು ಖಚಿತಪಡಿಸಿದ್ದಾರೆ.

'ಹರಿಯಾಣ, ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳೂ ಬಿಜೆಪಿ ನೇತೃತ್ವದ ಡಬಲ್‌ ಎಂಜಿನ್‌ ಸರ್ಕಾರ ಪತನವಾಗಲಿದೆ ಎಂಬುದನ್ನು ಸೂಚಿಸಿವೆ' ಎಂದಿದ್ದಾರೆ.

ಬಿಜೆಪಿಯು ಬಡವರ ವಿರೋಧಿಯಾಗಿದೆ ಎಂದು ಕಿಡಿಕಾರಿರುವ ಅವರು, 'ದೆಹಲಿಯಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ. ಅಲ್ಲಿರುವುದು ಲೆಫ್ಟಿನೆಂಟ್‌ ಗವರ್ನರ್‌ ಆಡಳಿತ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.