ನವದೆಹಲಿ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲು ನಮ್ಮ ಪಕ್ಷವು ಯಾರಿಗೂ ಅವಕಾಶ ನೀಡುವುದಿಲ್ಲ. ಸರ್ಕಾರಿ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿಡಲು ಸೂಕ್ತ, ದೋಷರಹಿತ ಯೋಜನೆ ರೂಪಿಸಿ, ನಿಮ್ಮ ಮುಂದಿಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಭರವಸೆ ನೀಡಿದರು.
ಉತ್ತರ ಪ್ರದೇಶ ಸರ್ಕಾರವು ಪೊಲೀಸ್ ನೇಮಕಾತಿ ಪರೀಕ್ಷೆಯನ್ನು ರದ್ದು ಮಾಡಿರುವುದನ್ನು ಉಲ್ಲೇಖಿಸಿ, ‘ಪ್ರಶ್ನೆ ಪತ್ರಿಕೆ ಸೋರಿಕೆ ಸಮಸ್ಯೆಯು ಉತ್ತರ ಪ್ರದೇಶದ ಯುವಜನತೆಗೆ ಮಾತ್ರವಲ್ಲ, ಇಡೀ ದೇಶಕ್ಕೆ ಶಾಪವಿದ್ದಂತೆ’ ಎಂದು ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.
‘70ಕ್ಕೂ ಹೆಚ್ಚು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಎರಡು ಕೋಟಿಗೂ ಅಧಿಕ ಆಕಾಂಕ್ಷಿಗಳ ಕನಸನ್ನು ನುಚ್ಚುನೂರು ಮಾಡಿವೆ. ಭವಿಷ್ಯವನ್ನು ಕಟ್ಟಿಕೊಳ್ಳುವ ವರ್ಷಗಳ ಪ್ರಯತ್ನವನ್ನು ಹಾಳುಮಾಡಿವೆ’ ಎಂದು ಹೇಳಿದ್ದಾರೆ.
‘ಪ್ರಶ್ನೆ ಪತ್ರಿಕೆ ಸೋರಿಕೆಗೆ ಮೂರು ಕಾರಣ ಎಂದು ವಿದ್ಯಾರ್ಥಿಗಳು ತಿಳಿಸಿದರು. ಅವುಗಳೆಂದರೆ ‘ಮಾರಿಕೊಂಡ’ ಸರ್ಕಾರಿ ಆಡಳಿತ ವ್ಯವಸ್ಥೆ, ಖಾಸಗಿ ಮುದ್ರಣಾಲಯಗಳು ಮತ್ತು ನೇಮಕಾತಿಗೆ ಸಂಬಂಧಿಸಿದ ಇಲಾಖೆಗಳು ಭ್ರಷ್ಟಾಚಾರದ ಕೂಪಗಳಾಗಿರುವುದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.