ನವದೆಹಲಿ: ‘ಆರೋಗ್ಯದ ಮೇಲೆ ಪರಿಣಾಮ ಉಂಟಾದರೂ ತೊಂದರೆಯಿಲ್ಲ, ಹರಿಯಾಣವು ದೆಹಲಿಯ ಪಾಲಿನ ನೀರನ್ನು ಬಿಡುಗಡೆ ಮಾಡುವವರೆಗೂ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಜಲ ಸಚಿವೆ ಅತಿಶಿ ಹೇಳಿದ್ದಾರೆ.
ದೆಹಲಿಗೆ ಸಮಪ್ರಮಾಣದ ನೀರನ್ನು ಹರಿಯಾಣ ಸರ್ಕಾರ ನೀಡಬೇಕು ಎಂದು ಆಗ್ರಹಿಸಿ ಅತಿಶಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸೋಮವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
‘ನನ್ನ ರಕ್ತದೊತ್ತಡ ಮತ್ತು ಸಕ್ಕರೆಯ ಮಟ್ಟವು ಕುಸಿಯುತ್ತಿದೆ, ನನ್ನ ತೂಕವೂ ಕಡಿಮೆಯಾಗಿದೆ. ದೀರ್ಘಾವಧಿಯಲ್ಲಿ ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡುವ ಕೀಟೋನ್ ಮಟ್ಟವು ತುಂಬಾ ಹೆಚ್ಚಾಗುತ್ತಿದೆ. ನನ್ನ ದೇಹವು ಎಷ್ಟೇ ನರಳಿದರೂ ಹರಿಯಾಣ ನೀರು ಬಿಡುವವರೆಗೂ ನಾನು ಉಪವಾಸವನ್ನು ಮುಂದುವರಿಸುತ್ತೇನೆ’ ಎಂದು ಹೇಳಿದ್ದಾರೆ.
ಕಳೆದ ಮೂರು ವಾರಗಳಿಂದ ಹರಿಯಾಣವು ಯಮುನಾ ನೀರಿನಲ್ಲಿ ದೆಹಲಿಯ ಪಾಲನ್ನು ದಿನಕ್ಕೆ 100 ಮಿಲಿಯನ್ ಗ್ಯಾಲನ್‌ಗಳಷ್ಟು (MGD) ಕಡಿಮೆ ಮಾಡಿದೆ. ಇದು ದೆಹಲಿಯಲ್ಲಿ 28 ಲಕ್ಷ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಈ ನಡುವೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಭಾನುವಾರ ಎಎಪಿ ನಿಯೋಗದೊಂದಿಗಿನ ಸಭೆಯ ನಂತರ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ದೆಹಲಿಗೆ ಹೆಚ್ಚುವರಿ ನೀರನ್ನು ನೀಡಬಹುದೇ ಎಂದು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.