ನವದೆಹಲಿ: ದೇಶ ವಿರೋಧಿ ಪಡೆಗಳನ್ನು ನಿಶಕ್ತಿಗೊಳಿಸುವ ಪ್ರಯತ್ನ ಮುಂದುವರಿಯಲಿದೆ. ಸೆರೆವಾಸದಿಂದಾಗಿ ನನ್ನ ಸಂಕಲ್ಪ ಇನ್ನುಷ್ಟು ಗಟ್ಟಿಯಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ತಿಹಾರ್ ಜೈಲಿನಿಂದ ಬಿಡುಗಡೆಗೊಂಡ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಜೈಲಿನಿಂದ ಹೊರಬಂದ ಅವರು ಕಾರ್‌ನ ಸನ್‌ರೂಫ್‌ನಲ್ಲಿ ನಿಂತು ನರೆದಿದ್ದ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿರು. ‘ಇಂಕ್ವಿಲಾಬ್ ಜಿಂದಾಬಾದ್’ ‘ವಂದೇ ಮಾತರಂ’ ಎಂದು ಅವರು ಘೋಷಣೆ ಕೂಗಿದರು. ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಕಾರ್ಯಕರ್ತರೂ ಉದ್ಘೋಷ ಮೊಳಗಿಸಿದರು.
‘ನನ್ನ ಬಿಡುಗಡೆಗೆ ಪ್ರಾರ್ಥಿಸಿದ ಎಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಮಳೆಯನ್ನು ಲೆಕ್ಕಿಸದೇ ಇಲ್ಲಿಗೆ ಬಂದಿದ್ದೀರಿ. ನನ್ನ ರಕ್ತದ ಪ್ರತಿಯೊಂದು ಹನಿ ಈ ದೇಶದ ಸೇವೆಗಾಗಿ ಮುಡಿಪಾಗಿಟ್ಟಿದ್ದೇನೆ. ನಾನು ನನ್ನ ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಿದ್ದೇನೆ. ದೇವರು ಯಾವಾಗಲೂ ನನ್ನ ಜೊತೆಗೆ ಇದ್ದ’ ಎಂದು ಹೇಳಿದ್ದಾರೆ.
‘ನನ್ನ ಸಂಕಲ್ಪವನ್ನು ಮುರಿಯಲು ಅವರು ನನ್ನನ್ನು ಜೈಲಿಗೆ ಕಳುಹಿಸಿದರು. ಆದರೆ ನನ್ನ ಸಂಕಲ್ಪ ಮತ್ತಷ್ಟು ಗಟ್ಟಿಯಾಯಿತು. ಜೈಲು ನನ್ನನು ಕುಂದಿಸಲು ಸಾಧ್ಯವಿಲ್ಲ. ದೇಶ ವಿರೋಧಿ ಪಡೆಗಳ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ’ ಎಂದು ನುಡಿದಿದ್ದಾರೆ.
ಬಿಡುಗಡೆಗೂ ಮುನ್ನ ಎಎಪಿಯ ನೂರಾರು ಕಾರ್ಯಕರ್ತಯರು, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಂಸದ ಸಂಜಯ್ ಸಿಂಗ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಜೈಲಿನ ಹೊರಗೆ ಕೇಜ್ರಿವಾಲ್ ಅವರ ಸ್ವಾಗತಕ್ಕೆ ಕಾದಿದ್ದರು.
ಮಳೆಯಲ್ಲಿ ನೆನೆದುಕೊಂಡೇ ಕೇಜ್ರಿವಾಲ್ ಪರ ಘೋಷಣೆಗಳು ಮೊಳಗಿಸಿದರು. ’ಜೈಲಿನ ಕಂಬಿಗಳನ್ನು ಮುರಿದು ಕೇಜ್ರಿವಾಲ್ ಹೊರಗೆ ಬಂದರು’, ‘ಭ್ರಷ್ಟಾಚಾರಕ್ಕೊಂದು ಕಾಲ.. ಕೇಜ್ರಿವಾಲ್ ಕೇಜ್ರಿವಾಲ್’ ಎನ್ನುವ ಘೋಷಣೆ ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.