ಚೆನ್ನೈ: ‘ಸನಾತನ ಧರ್ಮದ ವಿರುದ್ಧ ಮಾತನಾಡುವುದನ್ನು, ಅದನ್ನು ವಿರೋಧಿಸುವುದನ್ನು ಮುಂದುವರಿಸುತ್ತೇನೆ. ಈ ವಿಷಯದಲ್ಲಿ ಎಷ್ಟು ಪ್ರಕರಣ ದಾಖಲಾದರೂ ಎದುರಿಸಲು ನಾನು ಸಿದ್ಧ’ ಎಂದು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
‘ಆದರೆ, ಯಾವುದೇ ಸಮುದಾಯದ ಹತ್ಯಾಕಾಂಡ ಮಾಡಬೇಕು ಎಂದು ನಾನು ಎಂದಿಗೂ ಹೇಳಿಲ್ಲ. ಸನಾತನ ಧರ್ಮದ ನಿರ್ಮೂಲನೆ ಕುರಿತಂತೆ ಭಾನುವಾರ ನಾನು ಹೇಳಿರುವ ಮಾತುಗಳಿಗೆ ಈಗಲೂ ಬದ್ಧನಾಗಿದ್ದೇನೆ’ಎಂದು ಸೋಮವಾರ ಸ್ಪಷ್ಟಪಡಿಸಿದರು.
ತಮ್ಮ ಹೇಳಿಕೆಗೆ ವ್ಯಕ್ತವಾದ ಆಕ್ರೋಶ, ಟೀಕೆಗಳಿಂದ ಧೃತಿಗೆಡದ ಅವರು, ‘ನನ್ನ ಮಾತಿನಿಂದ ಹಲವರಿಗೆ ಇರಿಸುಮುರಿಸಾಗುತ್ತದೆ ಎಂದಿದ್ದೆ. ಅದು ನಿಜವಾಗಿದೆ. ಸನಾತನ ಧರ್ಮ ಮಹಿಳೆಯರ ಬೆಳವಣಿಗೆಗೆ ಅಡ್ಡಿಯಾಗಿದೆ. ಇದಕ್ಕೆ ಪೆಟ್ಟು ನೀಡಿರುವುದೇ ದ್ರಾವಿಡ ಸಿದ್ಧಾಂತ’ ಎಂದರು.
ಒಂದು ಸಿದ್ಧಾಂತವನ್ನು ವಿರೋಧಿಸುವುದರ ಅರ್ಥ ಅದನ್ನು ಪಾಲಿಸುವವರನ್ನು ಕೊಲ್ಲುವುದು ಎಂದಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ‘ಕಾಂಗ್ರೆಸ್ ಮುಕ್ತ’ ಭಾರತ ಸ್ಥಾಪನೆ ಕುರಿತಂತೆ ಮಾತನಾಡುತ್ತಾರೆ. ಅದರರ್ಥ ಕಾಂಗ್ರೆಸ್ಸಿಗರನ್ನು ಕೊಲ್ಲುವುದು ಎಂಬುದೇ ಎಂದು ಕಟುವಾಗಿ ಪ್ರಶ್ನಿಸಿದ ಅವರು, ಬಿಜೆಪಿಯು ನನ್ನ ಹೇಳಿಕೆಯನ್ನು ‘ಹತ್ಯಾಕಾಂಡ’ ಎಂಬಂತೆ ತಿರುಚುತ್ತಿದೆ ಎಂದು ಆರೋಪಿಸಿದರು.
‘ಸನಾತನ ಧರ್ಮದ ಸಿದ್ಧಾಂತ ವಿರೋಧಿಸಬೇಕು ಎಂದಷ್ಟೇ ಹೇಳಿದ್ದೇನೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಪುನರುಚ್ಚರಿಸುತ್ತೇನೆ. ತಮಿಳುನಾಡಿನಲ್ಲಿ ಕೆಲವರು ದ್ರಾವಿಡ ಸಿದ್ಧಾಂತ ನಿರ್ಮೂಲನೆ ಮಾಡಬೇಕು ಎನ್ನುತ್ತಾರೆ. ಅದರರ್ಥ ಡಿ.ಎಂ.ಕೆಯವರನ್ನು ಕೊಲ್ಲಬೇಕು ಎಂಬುದೇ? ಎಂದು ಅವರು ಪ್ರಶ್ನಿಸಿದರು.
ಹಿಂದೂ ಧರ್ಮವನ್ನು ಡಿಎಂಕೆ ವಿರೋಧಿಸಿಲ್ಲ. ಎಲ್ಲ ಸಮುದಾಯದವರನ್ನು ಅರ್ಚಕರಾಗಿ ಮಾಡಿರುವುದು ಸೇರಿ ಹಲವು ಸುಧಾರಣೆಗಳನ್ನು ಪಕ್ಷ ತಂದಿದೆ. ಸಮಾನತೆಯ ವಿರುದ್ಧ ಇರುವ ಯಾವುದೇ ಸಿದ್ಧಾಂತಕ್ಕೆ ನಮ್ಮ ವಿರೋಧವಿದೆ ಎಂದು ಉದಯನಿಧಿ ಹೇಳಿದರು.
ವಿಸಿಕೆ ಬೆಂಬಲ: ಡಿಎಂಕೆ ಮೈತ್ರಿ ಪಕ್ಷವಾದ ವಿಡುತಲೈ ಚಿರುತೈಗಲ್ ಕಾಟ್ಚಿ (ವಿಸಿಕೆ) ಉದಯನಿಧಿ ಅವರನ್ನು ಬೆಂಬಲಿಸಿದೆ. ಪಕ್ಷದ ನಾಯಕ ತೋಲ್ ತಿರುಮವಲವನ್, ‘ಸನಾತನಧರ್ಮ ವಿರೋಧಿಸುವುದು ಎಂದರೆ ಹಿಂದುತ್ವವನ್ನು ವಿರೋಧಿಸುವುದು ಎಂದರ್ಥವಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.