ADVERTISEMENT

ಅಗತ್ಯವಾದರೆ ಕಪ್ಪು ಶಿಲೀಂಧ್ರ ಸೋಂಕನ್ನು ʼಸಾಂಕ್ರಾಮಿಕʼವೆಂದು ಘೋಷಣೆ: ಕೇಜ್ರಿವಾಲ್

ಏಜೆನ್ಸೀಸ್
Published 20 ಮೇ 2021, 16:29 IST
Last Updated 20 ಮೇ 2021, 16:29 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌   

ನವದೆಹಲಿ: ಅಗತ್ಯಬಿದ್ದರೆ ಕಪ್ಪು ಶಿಲೀಂಧ್ರ(ಬ್ಲ್ಯಾಕ್ ಫಂಗಸ್) ಸೋಂಕನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಗುರುವಾರ ತಿಳಿಸಿದ್ದಾರೆ. ಜೊತೆಗೆ, ಕೋವಿಡ್ ಚಿಕಿತ್ಸೆ ಸಂದರ್ಭದಲ್ಲಿಆಸ್ಪತ್ರೆಗಳು ಸ್ಟಿರಾಯ್ಡ್‌ ಅನ್ನು ನಿಯಂತ್ರಿತ ರೀತಿಯಲ್ಲಿ ಬಳಸಬೇಕು ಎಂದು ಮನವಿ ಮಾಡಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್‌, ʼಅಗತ್ಯವಾದರೆ, ದೆಹಲಿಯಲ್ಲಿ ಕಪ್ಪು ಶಿಲೀಂಧ್ರ ಪರಿಸ್ಥಿತಿಯನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗುವುದು. ವೈದ್ಯರು ಸ್ಟಿರಾಯ್ಡ್‌ ಅನ್ನು ನಿಯಂತ್ರಿತ ರೀತಿಯಲ್ಲಿ ಬಳಸಬೇಕು. ರೋಗಿಗಳು ತಮ್ಮ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಾಪಾಡಿಕೊಳ್ಳುವುದು ಅಗತ್ಯ. ಸ್ಟಿರಾಯ್ಡ್‌ ಮತ್ತು ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಳವೇ ಕಪ್ಪು ಶಿಲೀಂಧ್ರ‌ ಸೋಂಕಿಗೆ ಕಾರಣ‌ʼ ಎಂದು ತಿಳಿಸಿದ್ದಾರೆ.

ʼದೆಹಲಿಯು ದೇಶದ ರಾಜಧಾನಿಯಾಗಿದ್ದು, ವಿವಿಧ ರಾಜ್ಯಗಳ ಜನರೂ ಇಲ್ಲಿಗೆ ಚಿಕಿತ್ಸೆಗೆ ಆಗಮಿಸುತ್ತಾರೆ.ಕಪ್ಪು ಶಿಲೀಂಧ್ರ ಚಿಕಿತ್ಸೆಗಾಗಿ ಬರುವ ಪ್ರತಿಯೊಬ್ಬರಿಗೂನೀಡಲು ನಮ್ಮಲ್ಲಿ ಸಾಕಷ್ಟು ಪ್ರಮಾಣದಔಷಧಿಗಳಿರಬೇಕುʼ ಎಂದಿದ್ದಾರೆ.

ADVERTISEMENT

ಇಂದು ಬೆಳಿಗ್ಗೆ ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದ ಕೇಜ್ರಿವಾಲ್‌,ದೆಹಲಿಯ ಲೋಕ ನಾಯಕ ಜೈ ಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆ, ಗುರು ತೇಜ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆ ಮತ್ತು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ಪ್ರತ್ಯೇಕ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಘೋಷಿಸಿದ್ದರು.

ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌, ಮುಖ್ಯ ಕಾರ್ಯದರ್ಶಿ ಸೇರಿದಂತೆ ಆರೋಗ್ಯ ಇಲಾಖೆಯ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.