ಹೈದರಾಬಾದ್: ‘ಬಿಜೆಪಿಯು ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿನ ಮುಸ್ಲಿಂ ಮೀಸಲಾತಿಯನ್ನು ತೆಗೆದು ಹಾಕುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಘೋಷಿಸಿದ್ದಾರೆ.
ಹೈದರಾಬಾದ್ ಸಮೀಪದ ಚೆವೆಲ್ಲಾದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಜಯ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ‘ತೆಲಂಗಾಣದಲ್ಲಿ ಮುಸ್ಲಿಮರಿಗೆ ಮೀಸಲಾತಿ ಒದಗಿಸಿರುವುದು ಅಸಾಂವಿಧಾನಿಕವಾದುದು. ಇದಕ್ಕೆ ನಾವು ಕೊನೆ ಹಾಡುತ್ತೇವೆ. ಎಸ್ಸಿ, ಎಸ್ಟಿ ಹಾಗೂ ಒಬಿಸಿಗಳಿಗೆ ಮೀಸಲಾತಿಯ ಹಕ್ಕು ನೀಡುತ್ತೇವೆ’ ಎಂದಿದ್ದಾರೆ.
‘ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ತೆಲಂಗಾಣದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದ್ದು, ಶೇ 4ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಎಐಎಂಐಎಂ ಸಿದ್ಧಾಂತವನ್ನು ಜಾರಿಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿರುವ ಅಮಿತ್ ಶಾ, ‘ಕಾರಿನ (ಬಿಆರ್‌ಎಸ್ ಚುನಾವಣಾ ಚಿಹ್ನೆ) ‘ಸ್ಟೇರಿಂಗ್’, ಮಜಿಲಿಗಳು ಹಾಗೂ ಒವೈಸಿಗಳ ಕೈಯಲ್ಲಿರುವಾಗ ಅದು ಸರಿಯಾದ ದಿಕ್ಕಿನಲ್ಲಿ ಚಲಿಸಲು ಹೇಗೆ ಸಾಧ್ಯ’ ಎಂದು ವ್ಯಂಗ್ಯವಾಡಿದ್ದಾರೆ.
‘ಚಂದ್ರಶೇಖರ ರಾವ್ ಅವರು ಪ್ರಧಾನಿ ಹುದ್ದೆಗೇರುವ ಕನಸು ಕಾಣುತ್ತಿದ್ದಾರೆ. 2024ರಲ್ಲಿ ಮತ್ತೆ ನರೇಂದ್ರ ಮೋದಿಯವರೇ ಆ ಹುದ್ದೆ ಅಲಂಕರಿಸಲಿದ್ದಾರೆ. ರಾಜ್ಯದಲ್ಲಿ ಕೆಸಿಆರ್ ಅವರ ಭ್ರಷ್ಟ ಆಡಳಿತದ ಅಂತ್ಯ ಸನ್ನಿಹಿತವಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.