ADVERTISEMENT

ಬಿಜೆಪಿ ಸಖ್ಯ ಬಿಟ್ಟರೆ ಬೆಂಬಲ: ಜೆಡಿಯುಗೆ ಆರ್‌ಜೆಡಿ, ಕಾಂಗ್ರೆಸ್‌ ಭರವಸೆ

ಬಿಹಾರ: ಜೆಡಿಯುಗೆ ಆರ್‌ಜೆಡಿ, ಕಾಂಗ್ರೆಸ್‌ ಭರವಸೆ

ಪಿಟಿಐ
Published 8 ಆಗಸ್ಟ್ 2022, 20:15 IST
Last Updated 8 ಆಗಸ್ಟ್ 2022, 20:15 IST
ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್    

ಪಟ್ನಾ/ನವದೆಹಲಿ: ‘ಬಿಜೆಪಿ ಸಖ್ಯವನ್ನು ತೊರೆಯುವುದಾದರೆ ಜೆಡಿಯುಗೆ ಬೆಂಬಲ ನೀಡಲಾಗುವುದು’ ಎಂದು ಬಿಹಾರದ ವಿರೋಧ ಪಕ್ಷಗಳಾದ ಆರ್‌ಜೆಡಿ, ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಹೇಳಿವೆ. ಜೆಡಿಯು ಮತ್ತು ಬಿಜೆಪಿ ನಡುವಣ ಸಂಬಂಧ ಬಿಗಡಾಯಿಸಿರುವ ಸಂದರ್ಭದಲ್ಲೇ ವಿರೋಧ ಪಕ್ಷಗಳು ಬಹಿರಂಗವಾಗಿ ಈ ಮಾತು ಹೇಳಿವೆ.

ಬಿಜೆಪಿ ಜತೆಗಿನ ಮೈತ್ರಿಯನ್ನು ಜೆಡಿಯು ತೊರೆಯಲಿದೆ ಎಂಬ ವದಂತಿ ಹರಡಿದೆ. ಈ ವದಂತಿಯನ್ನು ಜೆಡಿಯು ನಿರಾಕರಿಸಿದೆ. ಆದರೆ, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಮಂಗಳವಾರ ತಮ್ಮ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ. ಜೆಡಿಯುವಿನ 45 ಶಾಸಕರು ಮತ್ತು ಎಲ್ಲಾ ಸಂಸದರೂ ಸಭೆಯಲ್ಲಿ ಇರಬೇಕು ಎಂದು ಸೂಚಿಸಿದ್ದಾರೆ. ‘ಪಕ್ಷದ ಮುಂದಿನ ನಡೆಯನ್ನು ಆ ಸಭೆಯಲ್ಲಿ ನಿರ್ಧರಿಸಲಾಗುವುದು’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಲನ್‌ ಸಿಂಗ್ ಹೇಳಿದ್ದಾರೆ.

ಇದರ ಜತೆಯಲ್ಲೇ ಪ್ರಮುಖ ವಿರೋಧ ಪಕ್ಷವಾದ ಆರ್‌ಜೆಡಿ ಸಹ ಮಂಗಳವಾರ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಪಕ್ಷದ ಎಲ್ಲಾ ಶಾಸಕರು ಸೋಮವಾರ ರಾತ್ರಿಯ ಹೊತ್ತಿಗೇ ಪಟ್ನಾಕ್ಕೆ ಬರಬೇಕು. ಮುಂದಿನ 5–6 ದಿನಗಳವರೆಗೆ ಎಲ್ಲರೂ ಪಟ್ನಾದಲ್ಲೇ ಇರಬೇಕು ಎಂದು ಎಲ್ಲಾ ಶಾಸಕರಿಗೆ ಸೂಚನೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ADVERTISEMENT

ಕಾಂಗ್ರೆಸ್‌ನ ಬಿಹಾರ ಘಟಕ ಸೋಮವಾರ ಸಭೆ ನಡೆಸಿದೆ. ಮಂಗಳವಾರವೂ ಸಭೆ ನಡೆಸಲಿದೆ.

ಸೋನಿಯಾ ಜತೆ ಮಾತುಕತೆ?

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜತೆ ಭಾನುವಾರ ರಾತ್ರಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಜೆಡಿಯು ಆಗಲೀ ಕಾಂಗ್ರೆಸ್‌ ಆಗಲೀ ಇದನ್ನು ದೃಢಪಡಿಸಿಲ್ಲ.

ಈ ಬಗ್ಗೆ ಪ್ರಶ್ನಿಸಿದಾಗ ಕಾಂಗ್ರೆಸ್‌ ರಾಷ್ಟ್ರೀಯ ಕಾರ್ಯದರ್ಶಿ ಶಕೀಲ್‌ ಅಹ್ಮದ್ ಖಾನ್ ಅವರು, ‘ಇದನ್ನು ನಾನು ದೃಢಪಡಿಸಲು ಸಾಧ್ಯವಿಲ್ಲ. ಪಕ್ಷದ ಉನ್ನತ ನಾಯಕರಷ್ಟೇ ಆ ಬಗ್ಗೆ ಹೇಳಬೇಕು’ ಎಂದು ಹೇಳಿದ್ದಾರೆ. ಈ ಮಾತುಕತೆ ನಡೆದಿದೆ ಎಂಬ ಸುದ್ದಿಯ ಬಗ್ಗೆ ಜೆಡಿಯು ಸಹ ಯಾವುದೇ ಮಾಹಿತಿ ನೀಡಿಲ್ಲ. ಜೆಡಿಯು ನಾಯಕರು, ‘ನಮಗೇನೂ ತಿಳಿದಿಲ್ಲ’ ಎಂದಷ್ಟೇ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.