ಮುಂಬೈ:ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ಎನ್‌ಸಿಪಿ ಜತೆಗೂಡಿ ಸರ್ಕಾರ ರಚಿಸುವುದು ಖಚಿತ ಎಂದು ಕಾಂಗ್ರೆಸ್ ಮುಖಂಡರು ಶನಿವಾರ ಹೇಳಿದ್ದಾರೆ.
'ಇಂದು ಮೂರೂ ಪಕ್ಷಗಳ ಮುಖಂಡರು ಸಭೆ ಸೇರಲಿದ್ದೇವೆ. ಆದರೆ, ಬೆಳಿಗ್ಗೆ ನಡೆದಿರುವ ಬೆಳವಣಿಗೆ ನಾಚಿಕೆಗೇಡಿನದು. ಆ ಬಗ್ಗೆ ಮಾತನಾಡಲು ನಮ್ಮಲ್ಲಿ ಪದಗಳೇ ಇಲ್ಲ. ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ನಾವು ಬಿಜೆಪಿಯನ್ನು ಸೋಲಿಸಲಿದ್ದೇವೆ' ಎಂದು ಕಾಂಗ್ರೆಸ್ ಮುಖಂಡ ಅಹಮದ್ ಪಟೇಲ್ ಹೇಳಿದರು.
'ನಮ್ಮ ಶಾಸಕರು ಒಗ್ಗಟ್ಟಿನಿಂದ ಇದ್ದಾರೆ. ಇಬ್ಬರು ಶಾಸಕರನ್ನು ಹೊರತುಪಡಿಸಿ ಕಾಂಗ್ರೆಸ್‌ನಎಲ್ಲ ಶಾಸಕರೂ ಇಲ್ಲಿಯೇ ಇದ್ದಾರೆ, ಇಬ್ಬರು ಮಾತ್ರ ಅವರ ಗ್ರಾಮಗಳಲ್ಲಿ ಇದ್ದಾರೆ. ನಾವು ಸಂವಿಧಾನಕ್ಕೆ ಬದ್ಧರಾಗಿದ್ದು, ರಾಜಕೀಯವಾಗಿ ಹಾಗೂ ಕಾನೂನು ರೀತಿಯ ಹೋರಾಟ ನಡೆಸಲಿದ್ದೇವೆ' ಎಂದರು.
ಮಹರಾಷ್ಟ್ರ ಇತಿಹಾಸದಲ್ಲಿ ಈ ದಿನ ಕಪ್ಪು ಚುಕ್ಕಿಯಾಗಿದೆ. ಬೆಳ್ಳಂಬೆಳಿಗ್ಗೆ ಎಲ್ಲವೂ ಗುಟ್ಟಾಗಿ ನಡೆದಿದೆ. ಇದಕ್ಕಿಂತಲೂ ನಾಚಿಕೆ ಸಂಗತಿ ಮತ್ತೊಂದಿಲ್ಲ ಎಂದು ಅಹಮದ್ ಪಟೇಲ್ ಕಿಡಿಕಾರಿದರು.
ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡಣವಿಸ್ ಮತ್ತು ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿಯ ಅಜಿತ್ ಪವಾರ್ ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಅದರ ಬೆನ್ನಲೇ ಎನ್‌ಸಿಪಿ ಮತ್ತು ಶಿವಸೇನಾ ಮುಖಂಡರು ಜತೆಯಾಗಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ರಚನೆ ಕಸರತ್ತು ಮುಂದುವರಿಸುವುದಾಗಿ ಘೋಷಿಸಿದರು. ಕಾಂಗ್ರೆಸ್ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.