ಕೋಲ್ಕತ್ತ: ಕೇಂದ್ರ ಸರ್ಕಾರದ ಹಲವು ಯೋಜನೆಗಳ ಅಡಿಯಲ್ಲಿ ರಾಜ್ಯಕ್ಕೆ ಬರಬೇಕಿರುವ ಅನುದಾನದ ವಿಚಾರವಾಗಿ ಮುಂದಿನ ತಿಂಗಳು ದೆಹಲಿಗೆ ತೆರಳಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸುವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಮಧ್ಯಾಹ್ನ ನಡೆದ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಕಾರ್ಯಕ್ರಮದಲ್ಲಿ ಮಮತಾ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು, 'ಡಿಸೆಂಬರ್ ಎರಡನೇ ಅಥವಾ ಮೂರನೇ ವಾರದಲ್ಲಿ ದೆಹಲಿಗೆ ಭೇಟಿ ನೀಡುವೆ. ಆ ಸಂದರ್ಭದಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆ. ಪ್ರಧಾನ ಮಂತ್ರಿಯವರನ್ನು ಭೇಟಿಯಾಗಿ, ರಾಜ್ಯಕ್ಕೆ ಬರಬೇಕಿರುವ ಕೇಂದ್ರದ ಬಾಕಿ ವಿಚಾರವಾಗಿ ಚರ್ಚಿಸಲು ಸಮಯ ಕೇಳಿದ್ದೇನೆ' ಎಂದಿದ್ದಾರೆ.
ಒಂದು ವೇಳೆ ಪ್ರಧಾನ ಮಂತ್ರಿಯವರು ಭೇಟಿಗೆ ಸಮಯ ನೀಡದಿದ್ದರೆ, ಸಂಸತ್ತಿನ ಉಭಯ ಸದನಗಳ ಸಂಸದರು ನನ್ನೊಂದಿಗೆ ಬರಲಿದ್ದಾರೆ. ಬಾಕಿ ಪಾವತಿ ವಿಚಾರವಾಗಿ ಕೇಂದ್ರದ ವಿರುದ್ಧ ಟಿಎಂಸಿ ಚಳವಳಿ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.
ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ನೇರವಾಗಿ ಹಾಜರಿರಲಿಲ್ಲ. ಬದಲಾಗಿ ಅವರು ವರ್ಚುವಲ್ ಆಗಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.