ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಕೆನಡಾ ಸಚಿವ ಮಾಡಿರುವ 'ಅಸಂಬದ್ಧ ಮತ್ತು ಆಧಾರರಹಿತ' ಆರೋಪಗಳು ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತವೆ ಎಂದು ಭಾರತ ಸ್ಪಷ್ಟಪಡಿಸಿದೆ. ಹಾಗೆಯೇ, ಕೆನಡಾದ ಹೈಕಮಿಷನ್ ಪ್ರತಿನಿಧಿಯನ್ನು ಕರೆಸಿ ಪ್ರತಿಭಟನೆ ದಾಖಲಿಸಿದೆ ಎಂದು ವಿದೇಶಾಂಗ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.
ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಗಳನ್ನು ಹತ್ಯೆಗೈಯುವ ಸಂಚಿನಲ್ಲಿ ಅಮಿತ್ ಶಾ ಅವರ ಕೈವಾಡವಿದೆ. ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸಲು, ಬೆದರಿಕೆ ಹಾಕಲು ಮತ್ತು ಗುಪ್ತಚರ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಅಮಿತ್ ಶಾ ಆದೇಶಿಸಿದ್ದರು ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್ ಮಾರಿಸನ್ ಮಂಗಳವಾರ ಆರೋಪಿಸಿದ್ದರು.
ಸಂಸತ್ ಸದಸ್ಯರನ್ನು ಒಳಗೊಂಡ ರಾಷ್ಟ್ರೀಯ ಭದ್ರತಾ ಸಮಿತಿ ಎದುರು, 'ವಾಷಿಂಗ್ಟನ್ ಪೋಸ್ಟ್' ಸುದ್ದಿ ಸಂಸ್ಥೆಗೆ ಶಾ ಅವರ ಹೆಸರನ್ನು ಖಚಿತ ಪಡಿಸಿದ್ದಾಗಿಯೂ ಮಾರಿಸನ್ ಹೇಳಿದ್ದರು.
ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಭಾರತದ ಖ್ಯಾತಿಗೆ ಕುಂದುಂಟು ಮಾಡಲು ಹಾಗೂ ಇತರ ರಾಷ್ಟ್ರಗಳ ಮೇಲೆ ಪ್ರಭಾವ ಬೀರುವ ಪ್ರಜ್ಞಾಪೂರ್ವಕ ಕಾರ್ಯತಂತ್ರದ ಭಾಗವಾಗಿ ಕೆನಡಾದ ಉನ್ನತ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಆಧಾರರಹಿತ ಮಾಹಿತಿಯನ್ನು ಹರಿಬಿಟ್ಟಿದ್ದಾರೆ. ಈ ಸುದ್ದಿಯು ಸದ್ಯದ ಕೆನಡಾದ ರಾಜಕೀಯ ಕಾರ್ಯಸೂಚಿಯ ಬಗ್ಗೆ ಭಾರತ ಮೊದಲಿನಿಂದಲೂ ಹೊಂದಿರುವ ದೃಷ್ಟಿಕೋನವನ್ನು ಖಚಿತಪಡಿಸಿದೆ ಎಂದಿದ್ದಾರೆ.
ಬೇಜವಾಬ್ದಾರಿಯ ಹೇಳಿಕೆಗಳು ದ್ವಿಪಕ್ಷೀಯ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತವೆ ಎಂದು ಹೇಳಿದ್ದಾರೆ.
ಭಾರತವು ಕೆನಡಾದ ಹೈಕಮಿಷನ್ ಪ್ರತಿನಿಧಿಯನ್ನು ಕರೆಸಿ, ಕೇಂದ್ರ ಗೃಹ ಸಚಿವರ ಬಗ್ಗೆ ಕೆನಡಾದ ಸಚಿವ ಮಾಡಿರುವ 'ಅಸಂಬದ್ಧ ಮತ್ತು ಆಧಾರರಹಿತ' ಆರೋಪಗಳ ಬಗ್ಗೆ ತೀವ್ರ ಪ್ರತಿಭಟನೆ ದಾಖಲಿಸಿದೆ ಎಂದೂ ತಿಳಿಸಿದ್ದಾರೆ.
2023ರ ಜೂನ್‌ನಲ್ಲಿ ಕೆನಡಾದಲ್ಲಿ ನಡೆದಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಪಾತ್ರದ ಬಗ್ಗೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವರ್ಷದ ಹಿಂದೆ ಹೇಳಿದ್ದರು.
ಇದಕ್ಕೆ ಪೂರಕವಾಗಿ ಪುರಾವೆಗಳನ್ನು ಭಾರತೀಯ ಅಧಿಕಾರಿಗಳ ಜತೆ ಹಂಚಿಕೊಂಡಿರುವುದಾಗಿ ಕೆನಡಾ ಅಧಿಕಾರಿಗಳು ಪದೇ ಪದೇ ಹೇಳಿಕೊಂಡು ಬಂದಿದ್ದಾರೆ. ಆದರೆ ಇದನ್ನು ಭಾರತೀಯ ಅಧಿಕಾರಿಗಳು ನಿರಾಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.