ADVERTISEMENT

Indian Politics | ಮಹಾ ಚುನಾವಣೆ ಫಲಿತಾಂಶ: ಪಕ್ಷದ ಆತ್ಮಾವಲೋಕನದ ಸಮಯ: ಸುಳೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 5:15 IST
Last Updated 25 ನವೆಂಬರ್ 2024, 5:15 IST
ಸುಪ್ರಿಯಾ ಸುಳೆ
ಸುಪ್ರಿಯಾ ಸುಳೆ   

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 10 ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ. ಈ ಚುನಾವಣಾ ಫಲಿತಾಂಶದಿಂದಾಗಿ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಲಿದೆ. ಈ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಹೇಳಿದ್ದಾರೆ.

ಚುನಾವಣೆಯಲ್ಲಿ ರಾಜ್ಯದ ಜನರು ನೀಡಿರುವ ತೀರ್ಪನ್ನು ಗೌರವಿಸುತ್ತೇವೆ. ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ಹಾಗೂ ರಾಜ್ಯದ ಹಿತಕ್ಕಾಗಿ ಕೆಲಸ ಮಾಡಲು ಎನ್‌ಸಿಪಿ (ಎಸ್‌ಪಿ) ಬದ್ಧವಾಗಿದೆ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್‌‘ನಲ್ಲಿ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದರೂ ಧೃಢಸಂಕಲ್ಪದಿಂದ ಮುನ್ನಡೆಯುವುದಾಗಿಯೂ ಸುಳೆ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸೋಲಿನಿಂದ ಪಾಠವನ್ನು ಕಲಿಯುತ್ತೇವೆ. ನಾವು ನಂಬುವ ಮೌಲ್ಯಗಳಿಗೆ ಪ್ರಾಮಾಣಿಕತೆಯಿಂದ ಬದ್ಧರಾಗಿರುತ್ತೇವೆ. ಪ್ರಗತಿಪರ ಮಹಾರಾಷ್ಟ್ರದ ನಿರ್ಮಾಣದ ಚಿಂತನೆ ಬದಲಾಗುವುದಿಲ್ಲ. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಸೇರಿದಂತೆ ಸಮಾಜದ ಹಿಂದುಳಿದ ವರ್ಗಗಳ ಘನತೆ ಮತ್ತು ಸ್ವಾಭಿಮಾನಕ್ಕಾಗಿ ಹೋರಾಡುವ ನಮ್ಮ ಪ್ರತಿಜ್ಞೆಯನ್ನು ನಾವು ಪುನರುಚ್ಚರಿಸುತ್ತೇವೆ’ಎಂದೂ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಜ್ಯೋತಿಬಾ ಫುಲೆ ಅವರಂತಹ ಸಮಾಜ ಸುಧಾರಕರ ಆದರ್ಶಗಳನ್ನು ಪಕ್ಷ ಪಾಲಿಸುತ್ತದೆ ಹಾಗೂ ಮುಂದುವರಿಸುತ್ತದೆ ಎಂದು ಸುಪ್ರಿಯಾ ಸುಳೆ ತಿಳಿಸಿದ್ದಾರೆ.

ರಾಜ್ಯದ 288 ವಿಧಾನಸಭಾ ಸ್ಥಾನಗಳ ಪೈಕಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ) ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ಮೈತ್ರಿಕೂಟ ಕೇವಲ 46 ಸ್ಥಾನಗಳನ್ನು ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.