ಲಖನೌ: ‘ತಾಜ್‌ಮಹಲ್ ಮೂಲದಲ್ಲಿ ಶಿವನ ದೇವಾಲಯ. ಈ ಐತಿಹಾಸಿಕ ಕಟ್ಟಡವನ್ನು ಧ್ವಂಸಗೊಳಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವ ವಹಿಸಿಕೊಂಡರೆ ನಾನೂ ಕೈಜೋಡಿಸುತ್ತೇನೆ’ ಎಂದು ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಅಜಂ ಖಾನ್ ಹೇಳಿದ್ದಾರೆ.
ತಾಜ್‌ಮಹಲ್ ಶಿವನ ದೇವಾಲಯ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಗೆ ಅಜಂ ಖಾನ್ ಈ ರೀತಿ ಚುಚ್ಚು ಮಾತಿನ ಪ್ರತಿಕ್ರಿಯೆ ನೀಡಿರುವ ವಿಡಿಯೊ ಈಗ ವೈರಲ್ ಆಗಿದೆ.
‘ತಾಜ್‌ಮಹಲ್ ಶಿವನ ದೇವಾಲಯ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದು, ಅದನ್ನು ಧ್ವಂಸಗೊಳಿಸಲು ನಾನು ಬೆಂಬಲ ನೀಡುತ್ತೇನೆ. ತಾಜ್‌ಮಹಲ್ ಕೆಡುವುವಲ್ಲಿ ಮೊದಲ ಹೊಡೆತ ಯೋಗಿ ಆದಿತ್ಯನಾಥ್ ಅವರದಾದರೆ, ಎರಡನೇ ಏಟು ನನ್ನದಾಗಿರುತ್ತದೆ. ಈ ಕಾರ್ಯಕ್ಕೆ ಹೆಗಲು ಕೊಡುವ ಸಂಬಂಧ ನಾನೂ ಬಿಜೆಪಿ ಸೇರುತ್ತೇನೆ. ಜೊತೆಗೆ 20 ಸಾವಿರಕ್ಕೂ ಅಧಿಕ ಜನರನ್ನು ಕರೆದುಕೊಂಡು ಬರುತ್ತೇನೆ’ ಎಂದು ಅವರು ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.
‘ತಾಜ್ ಮಹಲ್ ಗುಲಾಮಗಿರಿಯ ದ್ಯೋತಕವೂ ಆಗಿದೆ’ ಎಂದು ಹೇಳುವ ಮೂಲಕ ಅಜಂ ಖಾನ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ತಿವಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.