ADVERTISEMENT

ಮೃದಂಗಕ್ಕೆ ಗೋ ಚರ್ಮ: ಟಿ.ಎಂ.ಕೃಷ್ಣ ಕೃತಿಗೆ ಆಕ್ಷೇಪ

ಕೃತಿ ಬಿಡುಗಡೆಗೆ ಸಭಾಂಗಣ ನೀಡಿ ಅನುಮತಿ ಹಿಂಪಡೆದ ಚೆನ್ನೈ ಕಲಾಕ್ಷೇತ್ರ ಫೌಂಡೇಷನ್

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 20:00 IST
Last Updated 30 ಜನವರಿ 2020, 20:00 IST
ಟಿ.ಎಂ. ಕೃಷ್ಣ ಅವರು ಬರೆದಿರುವ ‘ಸೆಬಾಸ್ಟಿಯನ್ & ಸನ್ಸ್’ ಪುಸ್ತಕ
ಟಿ.ಎಂ. ಕೃಷ್ಣ ಅವರು ಬರೆದಿರುವ ‘ಸೆಬಾಸ್ಟಿಯನ್ & ಸನ್ಸ್’ ಪುಸ್ತಕ   

ಚೆನ್ನೈ: ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ.ಎಂ. ಕೃಷ್ಣ ಅವರು ಬರೆದಿರುವ ‘ಸೆಬಾಸ್ಟಿಯನ್ & ಸನ್ಸ್’ ಪುಸ್ತಕದಲ್ಲಿ ಉಲ್ಲೇಖವಾಗಿರುವ, ‘ಮೃದಂಗ ತಯಾರಿಸಲು ಗೋವಿನ ಚರ್ಮ ಬಳಸಲಾಗುತ್ತದೆ’ ಎನ್ನುವ ಅಂಶದಿಂದ ಇಲ್ಲಿನ ಕಲಾಕ್ಷೇತ್ರ ಫೌಂಡೇಷನ್ ಆಕ್ರೋಶಗೊಂಡಿದೆ.

ಪುಸ್ತಕ ಬಿಡುಗಡೆಗೆ ‘ರುಕ್ಮಿಣಿ ಆರಂಗಂ’ ಸಭಾಂಗಣ ನೀಡಿದ್ದ ಸಂಸ್ಥೆ ಗುರುವಾರ ಅನುಮತಿ ಹಿಂಪಡೆದಿದೆ. ಇಂಗ್ಲಿಷ್‌ ರಾಷ್ಟ್ರೀಯ ದೈನಿಕವೊಂದರಲ್ಲಿ ಪುಸ್ತಕದ ಆಯ್ದ ಭಾಗ ಪ್ರಕಟವಾದ ಕೆಲವೇ ತಾಸುಗಳಲ್ಲಿ, ಕೃತಿಯ ಪ್ರಕಾಶಕರಿಗೆ ಪತ್ರದ ಮೂಲಕ ಸಂಸ್ಥೆ ಈ ವಿಷಯ ತಿಳಿಸಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯದ ವ್ಯಾಪ್ತಿಯಲ್ಲಿರುವ ಕಲಾಕ್ಷೇತ್ರವು ಸ್ವಾಯತ್ತ ಸಂಸ್ಥೆಯಾಗಿದೆ.

‘ಸರ್ಕಾರಿ ಸಂಸ್ಥೆಯಾಗಿರುವುದರಿಂದಾಗಿ, ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೌಹಾರ್ದತೆಗೆ ಭಂಗ ತರುವ ವುದೇ ಕಾರ್ಯಕ್ರಮಕ್ಕೂ ಅನುಮತಿ ನೀಡಲಾಗುವುದಿಲ್ಲ. ಕೃತಿಯಲ್ಲಿ ವಿವಾದಾತ್ಮಕ ವಿಷಯಗಳು ಉಲ್ಲೇಖವಾಗಿದ್ದು, ಇದಕ್ಕೆ ರಾಜಕೀಯ ಆಯಾಮಗಳಿವೆ ಎಂದು ಪ್ರಕಟಿತ ಲೇಖನದಿಂದ ತಿಳಿಯಿತು. ಕೃತಿಯಲ್ಲಿ ವಿವಾದಿತ ಅಂಶ ಇರುವುದು ಸಭಾಂಗಣವನ್ನು ಬಾಡಿಗೆಗೆ ನೀಡಿದಾಗ ತಿಳಿದಿರಲಿಲ್ಲ’ ಎಂದು ಕಲಾಕ್ಷೇತ್ರ ಫೌಂಡೇಷನ್ ನಿರ್ದೇಶಕಿ ರೇವತಿ ರಾಮಚಂದ್ರನ್ ‘ವೆಸ್ಟ್‌ಲ್ಯಾಂಡ್‌ ಪಬ್ಲಿಕೇಷನ್ಸ್‌ ಪ್ರೈ. ಲಿ’ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಎಲ್ಲ ವರ್ಗದ ಜನರಿಗೂ ತಲುಪಿಸುತ್ತಿರುವ ಕೃಷ್ಣ ಅವರು ಮೃದಂಗ ತಯಾರಕರ ಇತಿಹಾಸ ಕುರಿತು ಈ ಕೃತಿ ರಚಿಸಿದ್ದು, ಫೆ.2ರಂದು ಕಲಾಕ್ಷೇತ್ರದ ಆವರಣದಲ್ಲಿ ಬಿಡುಗಡೆಯಾಗಬೇಕಿತ್ತು.‌

ಬೇರೆ ಸ್ಥಳದಲ್ಲಿ ಬಿಡುಗಡೆ: ಕಲಾಕ್ಷೇತ್ರ ಅನುಮತಿ ಹಿಂಪಡೆದ ಕುರಿತು ಪ್ರತಿಕ್ರಿಯಿಸಿರುವ ಟಿ.ಎಂ. ಕೃಷ್ಣ ಅವರು, ‘ನಿಗದಿಯಂತೆಯೇ ಫೆ.2ರ ಸಂಜೆ 6.45ಕ್ಕೆ ಕೃತಿ ಬಿಡುಗಡೆಯಾಗಲಿದೆ. ಆದರೆ ಸ್ಥಳ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ’ ಎಂದು ಹೇಳಿದ್ದಾರೆ.

‘ಗೋವುಗಳನ್ನು ಹತ್ಯೆ ಮಾಡದೆ ಮೃದಂಗದಂತಹ ವಾದ್ಯಗಳನ್ನು ತಯಾರಿಸಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ. ಮೃದಂಗದ ನಾದ ಕೇಳಿ ಖುಷಿಪಡುವ ಜನರು, ಈ ವಾಸ್ತವ ಒಪ್ಪಲು ತಯಾರಿಲ್ಲ. ಮೃದಂಗ ತಯಾರಕರು ಬಹುತೇಕ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಇವರ ಜೀವನ ಹಾಗೂ ಇತಿಹಾಸವನ್ನು ಈ ಕೃತಿಯ ಮೂಲಕ ತಿಳಿಸಲಾಗುತ್ತಿದೆ. ನಿಜವಾದ ಶ್ರೇಯ ಸಲ್ಲಬೇಕಾಗಿದ್ದು, ಈ ತೆರೆಮರೆಯ ನಾಯಕರಿಗೆ’ ಎಂದು ಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕಲಾಕ್ಷೇತ್ರ ಮೃದಂಗ ನಿಷೇಧಿಸುತ್ತದೆಯೆ?’

‘ಗೋವಿನ ಚರ್ಮ ಬಳಸಿ ತಯಾರಿಸಲಾಗುತ್ತದೆ ಎನ್ನುವ ಕಾರಣಕ್ಕೆ ಕಲಾಕ್ಷೇತ್ರ ಮೃದಂಗವನ್ನು ನಿಷೇಧಿಸುತ್ತದೆಯೆ?’ ಎಂದು ಟಿ.ಎಂ. ಕೃಷ್ಣ ಪ್ರಶ್ನಿಸಿದ್ದಾರೆ.

‘ಮೃದಂಗ ತಯಾರಿಕೆ ಕಲೆಯಲ್ಲಿ ನಿಪುಣರಾಗಿರುವ ಜನರಿಗೆ ಈ ಕೃತಿ ಸಮರ್ಪಿತವಾಗಿದೆ. ಗೋವನ್ನು ಕಸಾಯಿಖಾನೆಗೆ ಕೊಂಡೊಯ್ದು, ಮಾಂಸ ಸ್ವಚ್ಛಗೊಳಿಸಿ, ಚರ್ಮದಿಂದ ವಾದ್ಯ ತಯಾರಿಸುವವರು ಇವರೆ. ಗೋವು, ಆಡಿನ ಚರ್ಮ ಬಳಸಿ ಸಂಗೀತ ವಾದ್ಯಗಳನ್ನು ತಯಾರಿಸುವ ವಾಸ್ತವವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ವಾಸ್ತವಾಂಶಗಳನ್ನು ತಿಳಿಸುವುದರಿಂದ ವಿವಾದ ಹೇಗೆ ಸೃಷ್ಟಿಯಾಗುತ್ತದೆ ಎಂದು ಅರ್ಥವಾಗುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.