ADVERTISEMENT

ಗಾಲ್ವಾನ್‌ ಕಣಿವೆಯ ಧೈರ್ಯಶಾಲಿಗಳ ತ್ಯಾಗ ವ್ಯರ್ಥವಾಗದು: ವಾಯುಪಡೆ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 4:20 IST
Last Updated 20 ಜೂನ್ 2020, 4:20 IST
ವಾಯುಪಡೆ ಮುಖ್ಯಸ್ಥ ಆರ್‌ಕೆಸ್‌ ಭದೌರಿಯಾ
ವಾಯುಪಡೆ ಮುಖ್ಯಸ್ಥ ಆರ್‌ಕೆಸ್‌ ಭದೌರಿಯಾ   

ಹೈದರಾಬಾದ್: ‘ಲಡಾಕ್‌ನ ಗಾಲ್ವಾನ್‌ ಕಣಿವೆಯ ಧೈರ್ಯಶಾಲಿಗಳ ತ್ಯಾಗವನ್ನು ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ. ಈ ಬಗ್ಗೆ ನಾನು ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ,’ ಎಂದು ಭಾರತೀಯ ವಾಯುಪಡೆಯ ಏರ್‌ ಚೀಫ್‌ ಮಾರ್ಷಲ್ ಆರ್‌.ಕೆ.ಎಸ್‌ ಭದೌರಿಯಾ ಹೇಳಿದ್ದಾರೆ.

ಹೈದರಾಬಾದ್‌ನ ವಾಯುಪಡೆ ಅಕಾಡೆಮಿಯಲ್ಲಿ ಶನಿವಾರ ಭದೌರಿಯಾ ಅವರ ಸಮ್ಮುಖದಲ್ಲಿ ಸಂಯೋಜಿತ ಪದವಿ ಪರೇಡ್ (ಸಿಜಿಪಿ) ನಡೆಯಿತು. ಈ ವೇಳೆ ಮಾತನಾಡಿದ ಅವರು, ‘ಯಾವುದೇ ಆಕಸ್ಮಿಕಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ನಾವು ಶಕ್ತವಾಗಿದ್ದೇವೆ ಎಂಬುದು ಬಹಳ ಸ್ಪಷ್ಟವಾಗಿರಬೇಕು. ಯಾವುದೇ ಸನ್ನಿವೇಶಕ್ಕೂ ನಾವು ಸರ್ವ ಸನ್ನದ್ಧರು. ಅಲ್ಲದೆ, ಗಾಲ್ವಾನ್‌ನ ಧೈರ್ಯಶಾಲಿಗಳ ತ್ಯಾಗವನ್ನು ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ,’ ಎಂದು ಅವರು ಹೇಳಿದರು.

‘ಗಾಲ್ವಾನ್ ಕಣಿವೆಯಲ್ಲಿ ಗಡಿ ರಕ್ಷಣೆಗಾಗಿ ತ್ಯಾಗ ಮಾಡಿದ ಕರ್ನಲ್ ಸಂತೋಷ್ ಬಾಬು ಮತ್ತು ಅವರ ಧೈರ್ಯಶಾಲಿ ಪಡೆಗೆ ನಾವೆಲ್ಲರೂ ಗೌರವ ಸಲ್ಲಿಸೋಣ. ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲೂ ಹೋರಾಡಿದ ಧೈರ್ಯಶಾಲಿಗಳ ಶೌರ್ಯ, ಭಾರತದ ಸಾರ್ವಭೌಮತ್ವವನ್ನು ಯಾವುದೇ ಹಂತದಲ್ಲೂ ರಕ್ಷಿಸುವ ನಮ್ಮ ಸಂಕಲ್ಪವನ್ನು ಪ್ರದರ್ಶಿಸುತ್ತಿದೆ,’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಮಿಲಿಟರಿ ಮಾತುಕತೆಯ ಸಮಯದಲ್ಲಿ ಆದ ಒಪ್ಪಂದಗಳ ನಂತರವೂ ಚೀನಾದ ಕಡೆಯಿಂದ ನಡೆದ ಒಪ್ಪಿತವಲ್ಲದ ನಡೆ ಮತ್ತು ಪ್ರಾಣಹಾನಿಗಳ ಹೊರತಾಗಿಯೂ ಗಡಿಯಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಗಳು ಮುಂದುವರಿದಿವೆ’ ಎಂದು ಭದೌರಿಯಾ ತಿಳಿಸಿದ್ದಾರೆ.

‘ನಮ್ಮ ಸಶಸ್ತ್ರ ಪಡೆಗಳು ಎಲ್ಲಾ ಸಮಯದಲ್ಲೂ ಸರ್ವ ಸನ್ನದ್ಧವಾಗಿರಬೇಕು ಮತ್ತು ಜಾಗರೂಕರಾಗಿರಬೇಕು ಎಂಬುದನ್ನು ಸದ್ಯದ ನಮ್ಮ ಪರಿಸ್ಥಿತಿಯು ಸೂಚಿಸುತ್ತಿದೆ. ಲಡಾಖ್‌ನ ಗಡಿಯಲ್ಲಿ ನಡೆದ ಘಟನೆಯೂ ಅದಕ್ಕೆ ಒಂದು ಸಣ್ಣ ಉದಾಹರಣೆಯಷ್ಟೇ,’ ಎಂದು ಅವರು ಭಾರತೀಯ ಪಡೆಗಳಿಗೆ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.