ADVERTISEMENT

ಆಂಧ್ರ, ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುತ್ತೀರಾ: ಮೋದಿಗೆ ಕಾಂಗ್ರೆಸ್‌ 4ಪ್ರಶ್ನೆ

ಪಿಟಿಐ
Published 6 ಜೂನ್ 2024, 9:53 IST
Last Updated 6 ಜೂನ್ 2024, 9:53 IST
<div class="paragraphs"><p>ಜೈರಾಂ ರಮೇಶ್‌</p></div>

ಜೈರಾಂ ರಮೇಶ್‌

   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಾತುಕೊಟ್ಟಂತೆ ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವರೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.  

ಮೋದಿ 3.0 ಸರ್ಕಾರ ರಚನೆಯಾಗಲಿದೆ ಎಂದು ಪದೇ ಪದೇ ಹೇಳಲಾಗುತ್ತಿದೆ ಆದರೆ ಈ ಬಾರಿ ಅದು ‘ಮೋದಿ 1/3 ಸರ್ಕಾರ’ ಎಂಬುದು ಸತ್ಯ ಎಂದು ಜೈರಾಂ ರಮೇಶ್‌ ಹೇಳಿದ್ದಾರೆ.

ADVERTISEMENT

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ಪ್ರಧಾನ ಮಂತ್ರಿಗೆ ಕಾಂಗ್ರೆಸ್‌ನಿಂದ ನಾಲ್ಕು ಪ್ರಶ್ನೆಗಳಿವೆ. ಎರಡು ಪ್ರಶ್ನೆ ಆಂಧ್ರಪ್ರದೇಶಕ್ಕೆ ಮತ್ತು ಎರಡು ಪ್ರಶ್ನೆ ಬಿಹಾರಕ್ಕೆ ಸಂಬಂಧಿಸಿದ್ದು, 2024ರ ಏಪ್ರಿಲ್‌ 30 ರಂದು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುತ್ತೇವೆ ಇದರಿಂದ ಹೂಡಿಕೆ ಹೆಚ್ಚಾಗುತ್ತದೆ ಎಂದು ಹೇಳಿದ್ದೀರಿ. ಈಗ ಹತ್ತು ವರ್ಷ ಕಳೆದಿದೆ, ಇನ್ನೂ ಕೊಟ್ಟ ಮಾತು ನೆರವೇರಿಲ್ಲ. ಆ ಭರವಸೆ ಈಡೇರುತ್ತದೆಯೇ’ ಎಂದು ಕೇಳಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ, ವಿಶಾಖಪಟ್ಟಣದಲ್ಲಿರುವ ಉಕ್ಕಿನ ಸ್ಥಾವರವನ್ನು ಖಾಸಗೀಕರಣಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಎಲ್ಲಾ ಪಕ್ಷಗಳು ಇದರ ವಿರುದ್ಧವಾಗಿದ್ದಾರೆ. ಹೀಗಾಗಿ ಖಾಸಗೀಕರಣಗೊಳಿಸುವ ಕ್ರಮದಿಂದ ಹಿಂದೆಸರಿಯುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

2014ರ ಚುನಾವಣೆ ವೇಳೆ ನೀಡಿದ್ದ ಬಿಹಾರಕ್ಕೆ ವಿಶೇಷ ಸ್ಥಾನಮಾನದ ಭರವಸೆ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರ ಹತ್ತು ವರ್ಷಗಳ ಹಿಂದಿನ ಬೇಡಿಕೆಯನ್ನು ಈಡೇರಿಸುತ್ತಾರೆಯೇ? ಎಂದರು.

ಆರ್‌ಜೆಡಿ ಸರ್ಕಾರ, ಕಾಂಗ್ರೆಸ್‌ ಮತ್ತು ನಿತೀಶ್‌ ಕುಮಾರ್‌ ಒಳಗೊಂಡ ಮಹಾಘಟಬಂಧನ್‌ ಸೇರಿ ಬಿಹಾರದಲ್ಲಿ ಜಾತಿ ಗಣತಿ ನಡೆಸಿದ್ದರು. ಕಾಂಗ್ರೆಸ್‌ ದೇಶದಾದ್ಯಂತ ಜಾತಿ ಗಣತಿ ನಡೆಸಬೇಕೆಂದು ಬೇಡಿಕೆ ಇಟ್ಟಿತ್ತು. ಇದಕ್ಕೆ ನಿತೀಶ್‌ ಕುಮಾರ್ ಕೂಡ ಸಮ್ಮತಿಸಿದ್ದರು. ಬಿಹಾರದಲ್ಲಿ ನಡೆದಂತೆ ದೇಶದಾದ್ಯಂತ ಜಾತಿ ಗಣತಿ ನಡೆಸುತ್ತೀರಿ ಎಂದು ಮಾತು ಕೊಡುತ್ತೀರಾ ಎಂದು ಪ್ರಧಾನಿಯನ್ನು ರಮೇಶ್ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.