ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ಭಾರತದಲ್ಲಿ 5G ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ಸಂವಹನ ಸಚಿವಾಲಯದ ‘ರಾಷ್ಟ್ರೀಯ ಬ್ರಾಡ್‌ಬ್ಯಾಂಡ್ ಮಿಷನ್ (ಎನ್‌ಬಿಎಂ)’ ಶನಿವಾರ ಟ್ವೀಟ್ ಮಾಡಿದೆ. ಅದೇ ದಿನ ‘ಭಾರತ ಮೊಬೈಲ್ ಕಾಂಗ್ರೆಸ್ (ಐಎಂಸಿ)’ ಕೂಡ ಆರಂಭವಾಗಲಿದೆ.
ಆದರೆ, ಎನ್‌ಬಿಎಂ ಮಾಡಿದ್ದ ಟ್ವೀಟ್ ಏಕಾಏಕಿ ಕಣ್ಮರೆಯಾಗಿದೆ. ಅದನ್ನು ಡಿಲಿಟ್ ಮಾಡಿರುವ ಸಾಧ್ಯತೆಗಳಿವೆ.
‘ಭಾರತದ ಡಿಜಿಟಲ್ ವ್ಯವಸ್ಥೆ ಮತ್ತು ಸಂಪರ್ಕ ವ್ಯವಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮವಾದ ‘ಇಂಡಿಯಾ ಮೊಬೈಲ್ ಕಾಂಗ್ರೆಸ್’ನಲ್ಲಿ 5G ಸೇವೆಗೆ ಚಾಲನೆ ನೀಡುತ್ತಿದ್ದಾರೆ’ ಎಂದು ಎನ್‌ಬಿಎಂನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಲಾಗಿತ್ತು.
ಆದರೆ, ಅಕ್ಟೋಬರ್ 1 ರಿಂದ 5G ಸೇವೆಗಳನ್ನು ಹೊರತರಲು ದೇಶವು ಇನ್ನೂ ಸಿದ್ಧವಾಗಿಲ್ಲ ಮತ್ತು ಹೊಸ ತಂತ್ರಜ್ಞಾನ ಜಾರಿಗೆ ಬರಲು ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂದು ಮೂಲಗಳು ಮಾಹಿತಿ ನೀಡಿವೆ.
ಕೆಂಪು ಕೋಟೆಯ ಮೇಲೆ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದ್ದ ಪ್ರಧಾನಿಯವರು ಭಾರತದಲ್ಲಿ 5G ಸೇವೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಿದ್ದರು.
ದೂರಸಂಪರ್ಕ ಇಲಾಖೆ ಮತ್ತು ‘ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ ಜಂಟಿಯಾಗಿ ಆಯೋಜಿಸಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ ಆರನೇ ಆವೃತ್ತಿಯು ಅಕ್ಟೋಬರ್ 1-4 ರಿಂದ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿದೆ.
‘ಅಕ್ಟೋಬರ್ 12 ರೊಳಗೆ ದೇಶದಲ್ಲಿ 5G ಸೇವೆಗಳನ್ನು ಹೊರತರುವ ನಿರೀಕ್ಷೆಯಿದೆ. ಬೆಲೆ ಗ್ರಾಹಕರ ಕೈಗೆಟುಕುವಂತೆ ಕೇಂದ್ರ ನೋಡಿಕೊಳ್ಳಲಿದೆ’ ಎಂದು ಕಳೆದ ತಿಂಗಳು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದರು.
ಇವುಗಳನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.