ADVERTISEMENT

ಸನಾತನ ಧರ್ಮದ ವಿರುದ್ಧ ಮಾತನಾಡುವವರ ಕಣ್ಣು, ನಾಲಗೆ ಕೀಳುವೆವು: ಕೇಂದ್ರ ಸಚಿವ

ಜೈಪುರ: ಬಿಜೆಪಿ ರ‍್ಯಾಲಿಯಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಬೆದರಿಕೆ

ಪಿಟಿಐ
Published 12 ಸೆಪ್ಟೆಂಬರ್ 2023, 16:17 IST
Last Updated 12 ಸೆಪ್ಟೆಂಬರ್ 2023, 16:17 IST
ಗಜೇಂದ್ರ ಸಿಂಗ್ ಶೆಖಾವತ್ 
ಗಜೇಂದ್ರ ಸಿಂಗ್ ಶೆಖಾವತ್    

ಜೈಪುರ (ಪಿಟಿಐ): ‘ಸನಾತನ ಧರ್ಮದ ವಿರುದ್ಧ ಮಾತನಾಡುವವರ ನಾಲಗೆ ಮತ್ತು ಕಣ್ಣುಗಳನ್ನು ಕಿತ್ತು ಹಾಕಲಾಗುವುದು’ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಗುಡುಗಿದ್ದಾರೆ. 

ಶೆಖಾವತ್ ಅವರ ಹೇಳಿಕೆ ಇರುವ ವಿಡಿಯೊ ತುಣುಕೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ರಾಜಸ್ಥಾನದಲ್ಲಿ ಈ ವರ್ಷದ ಅಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿಯು ಕಳೆದ ವಾರ ಬಡ್‌ಮೆರ್ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ‘ಪರಿವರ್ತನಾ ಯಾತ್ರಾ’ ರ‍್ಯಾಲಿಯಲ್ಲಿ ಶೆಖಾವತ್ ಅವರು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. 

ADVERTISEMENT

‘ಸನಾತನ ಧರ್ಮಕ್ಕೆ ಸವಾಲೊಡ್ಡುವವರ ವಿರುದ್ಧ ನಾವೆಲ್ಲ ಎದ್ದುನಿಲ್ಲಬೇಕಿದೆ. ಯಾರೇ ಆಗಲಿ ಸನಾತನ ಧರ್ಮದ ವಿರುದ್ಧ ಮಾತನಾಡಿದರೆ ಅಂಥವರ ನಾಲಗೆಯನ್ನು ಹೊರಗೆಳೆಯಲಾಗುವುದು, ಸನಾತನ ಧರ್ಮದ ವಿರುದ್ಧ ಕೆಂಗಣ್ಣು ಬೀರುವವರ ಕಣ್ಣುಗಳನ್ನೂ ಕಿತ್ತುಹಾಕಲಾಗುವುದು’ ಎಂದು ಶೆಖಾವತ್ ಬೆದರಿಕೆ ಒಡ್ಡಿದ್ದಾರೆ.

‘ಸನಾತನ ಧರ್ಮದ ವಿರುದ್ಧ ಮಾತನಾಡುವ ಯಾವುದೇ ವ್ಯಕ್ತಿಯು ಈ ದೇಶದಲ್ಲಿ ರಾಜಕೀಯ ಸ್ಥಾನಮಾನವನ್ನಾಗಲೀ, ಅಧಿಕಾರವನ್ನಾಗಲೀ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಾವು ಸವಾಲು ಎಸೆಯುತ್ತೇವೆ. ಅವರು ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಮೇಲೆ ದಾಳಿ ಮಾಡುವ ಪ್ರಯತ್ನವನ್ನು ಮಾಡುತ್ತಾರೆ’ ಎಂದೂ ಅವರು ಹೇಳಿದ್ದಾರೆ. 

‘2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವ ಉದ್ದೇಶ ಹೊಂದಿರುವ ‘ಇಂಡಿಯಾ’ ಮೈತ್ರಿಕೂಟವು ಮೇವು ಹಗರಣ ಸೇರಿದಂತೆ ಇತರ ಹಗರಣಗಳಲ್ಲಿ ಭಾಗಿಯಾದವರ ಗುಂಪಾಗಿದೆ. ‘ಮೋದಿ ಗೆದ್ದರೆ ಸನಾತನ ಧರ್ಮ ಬಲಾಢ್ಯವಾಗುತ್ತದೆ. ಹಾಗಾಗಿ, ಅವರನ್ನು ಸೋಲಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳುತ್ತಾರೆ. ಎರಡು ಸಾವಿರ ವರ್ಷಗಳಿಂದಲೂ ಭಾರತದ ಸಂಸ್ಕೃತಿಯನ್ನು ದುರ್ಬಲಗೊಳಿಸಲು ಅನೇಕರು ಯತ್ನಿಸಿದ್ದಾರೆ’ ಎಂದಿದ್ದಾರೆ.

‘ಅಲ್ಲಾವುದ್ದೀನ್ ಖಿಲ್ಜಿ, ಔರಂಗಜೇಬ್ ಅವರಂಥ ಆಡಳಿತಗಾರರೂ ನಮ್ಮ ಸಂಸ್ಕೃತಿಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರು. ಆದರೆ ನಿಮ್ಮ ಮತ್ತು ನನ್ನ ಪೂರ್ವಜರು ಸಮರ್ಥರಾಗಿದ್ದರು. ಅವರು ಸಂಸ್ಕೃತಿಯನ್ನು ರಕ್ಷಿಸಿದರು. ಮಹಾರಾಜ ಸೂರಜ್‌ಮಲ್, ವೀರ ದುರ್ಗಾದಾಸ್ ಮತ್ತು ಮಹಾರಾಣಾ ಪ್ರತಾಪ್ ಅವರ ಮೇಲೆ ಆಣೆ ಇಟ್ಟು ಹೇಳುತ್ತೇವೆ. ಸನಾತನ ಧರ್ಮದ ಮೇಲೆ ದಾಳಿ ಮಾಡುವವರನ್ನು ನಾವು ಸಹಿಸುವುದಿಲ್ಲ. ಅಂಥವರನ್ನು ಕಿತ್ತೆಸೆಯುತ್ತೇವೆ’ ಎಂದೂ ಶೆಖಾವತ್ ಆಕ್ರೋಶದಿಂದ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.