ADVERTISEMENT

NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: CBIಗೆ ವಹಿಸಲು ಬಿಹಾರ CMಗೆ ಡಿಸಿಎಂ ಮನವಿ

ಪಿಟಿಐ
Published 21 ಜೂನ್ 2024, 13:00 IST
Last Updated 21 ಜೂನ್ 2024, 13:00 IST
ವಿಜಯ್‌ ಕುಮಾರ್‌ ಸಿನ್ಹಾ
ವಿಜಯ್‌ ಕುಮಾರ್‌ ಸಿನ್ಹಾ   

ಪಟ್ನಾ: ‘ನೀಟ್‌’ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಶಂಕಿತ ಆರೋಪಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರ ಅಧಿಕಾರಿಗಳ ಜತೆಗಿನ ಸಂಬಂಧಗಳ ಕುರಿತು ತಿಳಿದುಕೊಳ್ಳಲು ಸಿಬಿಐ ತನಿಖೆಗೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಮನವಿ ಮಾಡುವುದಾಗಿ ಬಿಹಾರದ ಉಪಮುಖ್ಯಮಂತ್ರಿ ವಿಜಯ್‌ ಕುಮಾರ್‌ ಸಿನ್ಹಾ ಶುಕ್ರವಾರ ತಿಳಿಸಿದರು.

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿಕಂದರ್‌ ಪ್ರಸಾದ್‌ ಯದುವೇಂದು ಅವರು ತೇಜಸ್ವಿ ಯಾದವ್‌ ಅವರ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಸಿನ್ಹಾ ಗುರುವಾರ ಆರೋಪಿಸಿದ್ದರು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದೂ ಆಗ್ರಹಿಸಿದ್ದರು.

ಸಿಬಿಐ ಅಥವಾ ಯಾವುದೇ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವುದಕ್ಕೆ ಶಿಫಾರಸು ಮಾಡುವ ವಿಶೇಷ ಅಧಿಕಾರಿ ಮುಖ್ಯಮಂತ್ರಿ ಅವರಿಗಿದೆ. ಹೀಗಾಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡಲಾಗುವುದು ಎಂದು ಅವರು ಪಿಟಿಐಗೆ ತಿಳಿಸಿದರು.

ADVERTISEMENT

ಈ ಪ್ರಕರಣದ ತನಿಖೆ ನಡೆಸುತ್ತಿರುವ ಬಿಹಾರದ ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧಗಳ ಘಟಕ (ಇಒಯು) ಸಹ, ಆರೋಪಿ ಮತ್ತು ಆರ್‌ಜೆಡಿ ನಾಯಕನ ಅಧಿಕಾರಿಗಳ ಜತೆಗಿನ ಸಂಬಂಧದ ಕುರಿತು ತನಿಖೆ ಮಾಡುತ್ತದೆ ಎಂದು ಭಾವಿಸಿದ್ದೇನೆ ಎಂದು ಅವರು ಹೇಳಿದರು.

‘ಆರೋಪಿ ಸಿಕಂದರ್‌ಗೆ ಪಟ್ನಾ ಮತ್ತು ಇತರ ಸ್ಥಳಗಳಲ್ಲಿ ಅತಿಥಿ ಗೃಹಗಳಲ್ಲಿ ವಸತಿ ವ್ಯವಸ್ಥೆಯನ್ನು ಯಾದವ್‌ಗೆ ಸಂಬಂಧಿಸಿದ ಅಧಿಕಾರಿ ಮಾಡುತ್ತಿದ್ದರು. ಈ ಸಂಬಂಧ ಆ ಅಧಿಕಾರಿಯು ಸಿಕಂದರ್‌ಗೆ ಕಳುಹಿಸಿದ್ದ ಮೊಬೈಲ್‌ ಸಂದೇಶಗಳ ವಿವರ ನನ್ನ ಬಳಿ ಇದೆ’ ಎಂದು ಡಿಸಿಎಂ ಸಿನ್ಹಾ ಗುರುವಾರ ಆರೋಪಿಸಿದ್ದರು.

ಈ ಕುರಿತು ಆರ್‌ಜೆಡಿ ನಾಯಕ (ತೇಜಸ್ವಿ ಯಾದವ್‌) ಇನ್ನೂ ಏಕೆ ಮೌನವಾಗಿದ್ದಾರೆ ಎಂದೂ ಪ್ರಶ್ನಿಸಿದ ಅವರು, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ರಾಂಚಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗ ಈ ಆರೋಪಿ ಅವರ ಸಹವರ್ತಿಯಾಗಿದ್ದ ಎಂದೂ ಸಿನ್ಹಾ ಆರೋಪಿಸಿದರು.

13 ಜನರ ಬಂಧನ:

ನೀಟ್‌–ಯುಜಿ ಪ್ರಶ್ನಿ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕವು ಇಲ್ಲಿಯವರೆಗೆ 13 ಜನರನ್ನು ಬಂಧಿಸಿದೆ. ಇವರಲ್ಲಿ ಪರೀಕ್ಷಾ ಅಭ್ಯರ್ಥಿಗಳು, ಅವರ ಪೋಷಕರು ಮತ್ತು ಪ್ರಮುಖ ಆರೋಪಿ ಸಿಕಂದರ್‌ ಪ್ರಸಾದ್‌ ಯದುವೇಂದು ಅವರೂ ಸೇರಿದ್ದಾರೆ. 

ಸರ್ಕಾರ ಸ್ವತಂತ್ರವಾಗಿದೆ: ತೇಜಸ್ವಿ

ಪಟ್ನಾ (ಪಿಟಿಐ): ಉಪ ಮುಖ್ಯಮಂತ್ರಿ ವಿಜಯ್‌ ಕುಮಾರ್‌ ಸಿನ್ಹಾ ಮಾಡಿರುವ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲು ರಾಜ್ಯ ಸರ್ಕಾರ ಸ್ವತಂತ್ರವಾಗಿದೆ ಎಂದು ಹೇಳಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಇತರ ಇಬ್ಬರು ಆರೋಪಿಗಳ ಜತೆಗಿನ ಬಿಜೆಪಿ ಸಂಪರ್ಕದ ಬಗ್ಗೆಯೂ
ತನಿಖೆ ಆಗಬೇಕಿದೆ ಎಂದು ಪ್ರತಿಪಾದಿಸಿದರು.

‘ತನಿಖಾ ಸಂಸ್ಥೆಗಳು ಕೇಂದ್ರದ ಬಿಜೆಪಿ ಸರ್ಕಾರದ ಅಡಿಯಲ್ಲಿಯೇ ಇವೆ. ರಾಜ್ಯದಲ್ಲಿ ಅವರ ಪಕ್ಷವು ಸರ್ಕಾರದ ಭಾಗವಾಗಿದೆ. ಹೀಗಿರುವಾಗ ತನಿಖೆಗೆ ಆದೇಶಿಸಲು ಏಕೆ ಹಿಂಜರಿಯುತ್ತಿದ್ದಾರೆ’ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.