ಮುಂಬೈ: ಮಹಾರಾಷ್ಟ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಉದ್ಯಮಿ ಗೌತಮ್ ಅದಾನಿಗೆ ನೀಡಲಾಗಿರುವ ಧಾರಾವಿ ಕೊಳಗೇರಿ ಮರುಅಭಿವೃದ್ಧಿ ಯೋಜನೆಯ ಟೆಂಡರ್ ಅನ್ನು ರದ್ದು ಮಾಡಲಾಗುವುದು ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಧಾರಾವಿ ನಿವಾಸಿಗಳು ಹಾಗೂ ಅವರ ಉದ್ಯಮ ನಾಶಮಾಡಬಾರದು. ಅಲ್ಲಿ ವಾಸಿಸುತ್ತಿರುವವರಿಗೆ ಅಲ್ಲಿಯೇ 500 ಚದರ ಅಡಿಯ ಮನೆಗಳನ್ನು ನೀಡಬೇಕು’ ಎಂದಿದ್ದಾರೆ.
‘ಅಧಿಕಾರಕ್ಕೆ ಬಂದ ಬಳಿಕ, ಧಾರಾವಿ ಕೊಳಗೇರಿ ಯೋಜನೆಯನ್ನು ನಾವು ರದ್ದು ಮಾಡುತ್ತೇವೆ. ಆ ಯೋಜನೆಯನ್ನು ಈಗಲೇ ಯಾಕೆ ರದ್ದು ಮಾಡಬಾರದು ಎನ್ನುವುದಕ್ಕೆ ಸರ್ಕಾರವೇ ಉತ್ತರ ನೀಡಬೇಕು. ಮುಂಬೈ ನಗರವನ್ನು ಅದಾನಿ ನಗರವನ್ನಾಗಿಸಲು ನಾವು ಬಿಡುವುದಿಲ್ಲ’ ಎಂದು ಅವರು ನುಡಿದಿದ್ದಾರೆ.
‘ಅದಾನಿ ಸಮೂಹಕ್ಕೆ ನೀಡಲಾಗಿರುವ ಹೆಚ್ಚುವರಿ ರಿಯಾಯಿತಿಗಳನ್ನು ಮರುಅಭಿವೃದ್ಧಿ ಯೋಜನೆ ಒಪ್ಪಂದದಲ್ಲಿ ನಿರ್ದಿಷ್ಟವಾಗಿ ಹೇಳಿಲ್ಲ. ನಾವು ಹೆಚ್ಚುವರಿ ರಿಯಾಯಿತಿಗಳನ್ನು ನೀಡುವುದಿಲ್ಲ. ಧಾರಾವಿ ಜನರಿಗೆ ಯಾವುದು ಒಳಿತು ಎನ್ನುವುದನ್ನು ನೋಡಿ ನಾವು ಹೊಸ ಟೆಂಡರ್ ಕರೆಯುತ್ತೇವೆ’ ಎಂದು ಠಾಕ್ರೆ ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಶಿವಸೇನಾ (ಯುಬಿಟಿ), ಕಾಂಗ್ರೆಸ್ ಹಾಗೂ ಎನ್‌ಸಿಪಿ (ಶರದ್ ಪವಾರ್) ಪಕ್ಷಗಳು ಮಹಾವಿಕಾಸ್ ಅಘಾಡಿ ಮೈತ್ರಿ ರಚಿಸಿಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.