ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜೈಲಿನಿಂದಲೇ ಸರ್ಕಾರ ನಡೆಸುವ ನಿಟ್ಟಿನಲ್ಲಿ ಕಚೇರಿಯ ವ್ಯವಸ್ಥೆಗಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ ಪಂಜಾಬ್ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಭಗವಂತ ಮಾನ್ ಶನಿವಾರ ಹೇಳಿದ್ದಾರೆ.
'ಸರ್ಕಾರವನ್ನು ಜೈಲಿನಿಂದ ನಡೆಸಬಾರದು ಎಂದು ಎಲ್ಲಿಯೂ ಬರೆದಿಟ್ಟಿಲ್ಲ. ಕಾನೂನಿನ ಪ್ರಕಾರ ತಪ್ಪಿತ್ತಸ್ಥ ಎಂದು ಸಾಬೀತಾಗುವವರೆಗೂ ಜೈಲಿನಿಂದ ಕೆಲಸ ಮಾಡಬಹುದಾಗಿದೆ. ನಾವು ಜೈಲಿನಲ್ಲಿ ಕಚೇರಿಯ ವ್ಯವಸ್ಥೆ ಮಾಡುವುದಕ್ಕಾಗಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನ ಅನುಮತಿ ಕೋರಲಿದ್ದೇವೆ' ಎಂದು ಅವರು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದಲ್ಲಿ ಕೇಜ್ರಿವಾಲ್ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಭ್ರಷ್ಟಾಚಾರ ವಿರೋಧಿ ಅಂದೋಲನದ ಮೂಲಕ ಪಕ್ಷವನ್ನು ಅವರೇ ಹುಟ್ಟು ಹಾಕಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.
ಮಾರ್ಚ್ 21ರಂದು ದೆಹಲಿ ಅಬಕಾರಿ ನೀತಿ ಹಗರಣದ ಜೊತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು. ಮಾರ್ಚ್ 22ರಂದು ದೆಹಲಿಯ ವಿಶೇಷ ನ್ಯಾಯಾಲಯವು ಕೇಜ್ರಿವಾಲ್ ಅವರನ್ನು ಮಾರ್ಚ್ 28ರವರೆಗೆ ಇ.ಡಿ ವಶಕ್ಕೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.