ನವದೆಹಲಿ: ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ 11 ಮಂದಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಕೋರಲಾಗುವುದು ಎಂದು ಗುಜರಾತ್ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ.
ಈ ಅಪರಾಧಿಗಳ ಮರಣದಂಡನೆಯನ್ನು ಗುಜರಾತ್ ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಮಾಡಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪಾರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು, ಈ ಪ್ರಕರಣದ ಅಪರಾಧಿಗಳ ಜಾಮೀನು ಅರ್ಜಿಗಳ ಕುರಿತ ವಿಚಾರಣೆಯನ್ನು ಮೂರು ವಾರಗಳ ನಂತರ ವಿಚಾರಣೆಗೆ ನಿಗದಿ ಪಡಿಸಿದೆ.
ಅಪರಾಧಿಗಳ ಶಿಕ್ಷೆ ಮತ್ತು ಅವರು ಇದುವರೆಗೆ ಜೈಲಿನಲ್ಲಿ ಕಳೆದ ಅವಧಿಯ ವಿವರಗಳನ್ನೊಳಗೊಂಡ ಕ್ರೋಡೀಕೃತ ಪಟ್ಟಿಯನ್ನು ಸಲ್ಲಿಸುವಂತೆ ನ್ಯಾಯಪೀಠವು ಎರಡೂ ಕಡೆಯ ವಕೀಲರನ್ನು ಕೇಳಿದೆ.
‘ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದ್ದು, ಮಹಿಳೆಯರು ಮಕ್ಕಳು ಸೇರಿದಂತೆ 59 ಮಂದಿ ಜೀವಂತ ದಹನಗೊಂಡಿದ್ದರು. ಈ ಪ್ರಕರಣದ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂದು ನಾವು ಒತ್ತಾಯಿಸಲಿದ್ದೇವೆ’ ಎಂದು ಗುಜರಾತ್ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಈ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೊರ್ಟ್ ಈಗಾಗಲೇ ಜಾಮೀನು ಮಂಜೂರು ಮಾಡಿದ್ದು, ಏಳು ಮಂದಿ ಅಪರಾಧಿಗಳು ಜಾಮೀನಿಗಾಗಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬಾಕಿ ಉಳಿದಿದೆ.
ವಿಚಾರಣಾ ನ್ಯಾಯಾಲಯವು ಪ್ರಕರಣದ 11 ಅಪರಾಧಿಗಳಿಗೆ ಮರಣದಂಡನೆ ಹಾಗೂ 20 ಮಂದಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿತ್ತು. ಮರಣದಂಡನೆಯನ್ನು ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಾಡು ಮಾಡಿರುವುದನ್ನು ಪ್ರಶ್ನಿಸಿ ಗುಜರಾತ್ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
2002 ಫೆಬ್ರುವರಿ 27ರಂದು ಗುಜರಾತ್‌ನ ಗೋಧ್ರಾದಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ ಪರಿಣಾಮ 59 ಮಂದಿ ಮೃತಪಟ್ಟಿದ್ದರು. ಬಳಿಕ ರಾಜ್ಯದಾದ್ಯಂತ ಗಲಭೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.