ADVERTISEMENT

ಎಎಪಿ–ಎಸ್‌ಎಫ್‌ಜೆ ನಂಟಿನ ಕುರಿತು ನಾನೇ ಖುದ್ದು ಪರಿಶೀಲಿಸುವೆ: ಚನ್ನಿಗೆ ಶಾ ಭರವಸೆ

ಪಿಟಿಐ
Published 19 ಫೆಬ್ರುವರಿ 2022, 5:52 IST
Last Updated 19 ಫೆಬ್ರುವರಿ 2022, 5:52 IST
ಪಂಜಾಬ್‌ನ ಚುನಾವಣಾ ರ್‍ಯಾಲಿಯಲ್ಲಿ ಅಮಿತ್‌ ಶಾ
ಪಂಜಾಬ್‌ನ ಚುನಾವಣಾ ರ್‍ಯಾಲಿಯಲ್ಲಿ ಅಮಿತ್‌ ಶಾ    

ನವದೆಹಲಿ: ನಿಷೇಧಿತ ಪ್ರತ್ಯೇಕತಾವಾದಿ ಗುಂಪು ‘ಸಿಖ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ)’ ಎಎಪಿಗೆ ಬೆಂಬಲ ನೀಡಿದೆ ಎಂಬ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಭಾರತದ ಏಕತೆ ಮತ್ತು ಸಮಗ್ರತೆಯೊಂದಿಗೆ ಚೆಲ್ಲಾಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರಿಗೆ ತಿಳಿಸಿದ್ದಾರೆ.

ಅಧಿಕಾರ ಹಿಡಿಯಲು ಕೆಲವರು ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸುವ ಮಟ್ಟಕ್ಕೆ ಹೋಗುವುದು, ಪಂಜಾಬ್ ಮತ್ತು ದೇಶವನ್ನು ಒಡೆಯುವ ಹಂತಕ್ಕಿಳಿಯುವುದು ಅತ್ಯಂತ ಖಂಡನೀಯ ಎಂದು ಗೃಹ ಸಚಿವರು ಹೆಸರು ಹೇಳದೇ ಕೇಜ್ರಿವಾಲ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಖ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಎಎಪಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿಯೂ, ಆ ಪಕ್ಷಕ್ಕೆ ಬೆಂಬಲ ನೀಡಿರುವುದಾಗಿಯೂ ತಮಗೆ ಪತ್ರ ಬಂದಿದೆ ಎಂದು ಮುಖ್ಯಮಂತ್ರಿ ಚನ್ನಿ ಅವರು ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್‌ ಶಾ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

2017ರಲ್ಲಿ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಎಎಪಿಗೆ ಬೆಂಬಲ ನೀಡಿದ್ದಾಗಿ ಎಸ್‌ಎಫ್‌ಜೆ ಪತ್ರದಲ್ಲಿ ಉಲ್ಲೇಖಿಸಿದೆ ಎಂದು ಚನ್ನಿ ಹೇಳಿಕೊಂಡಿದ್ದಾರೆ.

ಎಎಪಿಗೆ ಮತ ಹಾಕುವಂತೆ ಎಸ್‌ಎಫ್‌ಜೆ ಮತದಾರರನ್ನು ಪ್ರೇರೇಪಿಸುತ್ತಿದೆ ಎಂದು ಚನ್ನಿ ಹೇಳಿದ್ದಾರೆ.

ಪಂಜಾಬ್ ವಿಧಾನಸಭಾ ಚುನಾವಣೆಗೆ ಫೆಬ್ರವರಿ 20 ರಂದು ಮತದಾನ ನಡೆಯಲಿದೆ.

‘ದೇಶದ ಏಕತೆ ಮತ್ತು ಸಮಗ್ರತೆಯೊಂದಿಗೆ ಆಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಭಾರತ ಸರ್ಕಾರವು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ನಾನೇ ವಿಷಯವನ್ನು ಆಳವಾಗಿ ಪರಿಶೀಲಿಸುತ್ತೇನೆ’ ಎಂದು ಶಾ ಹೇಳಿದರು.

ನಿಷೇಧಿತ, ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದುವುದು, ಬೆಂಬಲ ಪಡೆಯುವುದು ದೇಶದ ಏಕತೆ ಮತ್ತು ಸಮಗ್ರತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ ಎಂದು ಅವರು ಹೇಳಿದರು.

ಅಂತಹ ಶಕ್ತಿಗಳ ಕಾರ್ಯಸೂಚಿಯು ದೇಶದ ಶತ್ರುಗಳ ಕಾರ್ಯಸೂಚಿಗಿಂತಲು ಏನೂ ಭಿನ್ನವಾಗಿಲ್ಲ ಎಂದು ಶಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.