ಮುಂಬೈ: ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ಮಹಾರಾಷ್ಟ್ರ ಸರ್ಕಾರ ವಿಫಲವಾದರೆ ಜೂನ್ 5ರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಮರಾಠ ಮೀಸಲು ಹೋರಾಟಗಾರ ಮನೋಜ್ ಜಾರಂಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತಿ ಅಂಗವಾಗಿ ಅವರಿಗೆ ನಮನ ಸಲ್ಲಿಸಿದ ಬಳಿಕ ಜಾರಂಗೆ ಸುದ್ದಿಗಾರರೊಂದಿಗೆ ಮಾತನಾಡಿದರು. 4 ತಿಂಗಳ ಹಿಂದೆ ನಡೆದ ಹೋರಾಟಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಪೊಲೀಸರು ಇಂದಿಗೂ ಮರಾಠ ಮೀಸಲು ಹೋರಾಟಗಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ವಿರುದ್ಧ ಕಿಡಿಕಾರಿದರು.
‘ಮರಾಠ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ನೀಡಲು ಸರ್ಕಾರ ವಿಫಲವಾದರೆ ಜೂ.5ರಿಂದ ಉಪವಾಸ ಕುಳಿತು ಹೋರಾಟ ಮಾಡುತ್ತೇವೆ. ಜೂ.6ರಿಂದ ನಾವು ಹೊಸ ಆಂದೋಲನವನ್ನು ಆರಂಭಿಸುತ್ತೇವೆ. ಮುಂಬರುವ ವಿಧಾನಸಭೆ ಚುನಾವಣೆಗೆ ತಯಾರಿಯನ್ನೂ ಶುರು ಮಾಡುತ್ತೇವೆ. ಮಹಾ ವಿಕಾಸ ಅಘಾಡಿ ಸರ್ಕಾರ ನಮಗೆ ಮೀಸಲಾತಿ ನೀಡಲಿಲ್ಲ. ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಸರ್ಕಾರವೂ ಸಮುದಾಯಕ್ಕೆ ದ್ರೋಹ ಮಾಡಿದೆ. ಎಲ್ಲಾ ಪಕ್ಷಗಳು ಕಳೆದ 40 ವರ್ಷಗಳಿಂದ ಮರಾಠ ಸಮುದಾಯವನ್ನು ಬಳಸಿಕೊಂಡಿವೆ’ ಎಂದು ಆರೋಪಿಸಿದರು.
ಕಳೆದ ವರ್ಷ ಆಗಸ್ಟ್– ಸೆಪ್ಟೆಂಬರ್ ಹಾಗೂ ಅಕ್ಟೋಬರ್– ನವೆಂಬರ್‌ನಲ್ಲಿ ಜಾರಂಗೆ ಅವರು ಮರಾಠ ಮೀಸಲಾತಿ ನೀಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಸರ್ಕಾರ ಮೀಸಲಾತಿ ನೀಡುವ ಭರವಸೆ ನೀಡಿದ ಬಳಿಕ ಸತ್ಯಾಗ್ರಹವನ್ನು ಕೈಬಿಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.