ನವದೆಹಲಿ: ನಾಲ್ವರು ರೈತರ ಸಾವಿಗೆ ಕಾರಣವಾದ 2021ರ ಲಖಿಂಪುರ ಖೀರಿ ಹಿಂಸಾಚಾರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ಐದು ವರ್ಷ ಬೇಕಾಗಲಿವೆ ಎಂದು ಸೆಷನ್ಸ್ ಕೋರ್ಟ್ ನ್ಯಾಯಾಧೀಶರು, ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಆಶೀಶ್ ಮಿಶ್ರಾ ಜಾಮೀನು ಕೋರಿರುವ ಹಿನ್ನೆಲೆಯಲ್ಲಿ, ಈ ಪ್ರಕರಣಕ್ಕೆ ಸಂಬಂಧಿತ ಇತರ ಆರೋಪಿಗಳು ಇನ್ನೂ ಬಂಧನದಲ್ಲಿದ್ದಾರೆಯೇ ಎನ್ನುವ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ಮತ್ತು ಇತರ 12 ಮಂದಿ 2021ರ ಅಕ್ಟೋಬರ್‌ನಲ್ಲಿ ಪ್ರತಿಭಟನನಿರತ ರೈತರ ಮೇಲೆ ಕಾರು ಹರಿಸಿ, ನಾಲ್ವರು ರೈತರನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಆಶೀಶ್ ಜಾಮೀನು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ವಿ. ರಾಮಸುಬ್ರಮಣಿಯನ್ ಅವರಿದ್ದ ಪೀಠವು, ಇಂತಹ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲು ಸಾಮಾನ್ಯವಾಗಿ ಐದು ವರ್ಷಗಳು ಬೇಕಾಗಲಿವೆ ಎಂದು ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ನೀಡಿರುವ ಮಾಹಿತಿ ಗಮನಿಸಿತು. ಮುಂದಿನ ವಿಚಾರಣೆಯನ್ನು ಜನವರಿ 19ಕ್ಕೆ ನಿಗದಿಪಡಿಸಿತು.
ಸುಪ್ರೀಂ ಕೋರ್ಟ್‌ಗೆ ಕಳುಹಿಸಿದ ಪತ್ರದಲ್ಲಿ ಸೆಷನ್ಸ್ ನ್ಯಾಯಾಧೀಶರು, ಈ ಪ್ರಕರಣದಲ್ಲಿ 208 ಪ್ರಾಸಿಕ್ಯೂಷನ್ ಸಾಕ್ಷಿಗಳು, 171 ದಾಖಲೆಗಳು ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) 27 ವರದಿಗಳಿವೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.