ನವದೆಹಲಿ: ‘ಜುಮ್ಲಾಜೀವಿ,’ ‘ಸ್ನೂಪ್‌ಗೇಟ್,’ ‘ಕೋವಿಡ್ ಸ್ಪ್ರೆಡ್ಡರ್...’ ಇವು ಕೇಂದ್ರವನ್ನು ಟೀಕಿಸಲು ವಿಪಕ್ಷಗಳು ಬಳಸುತ್ತಿದ್ದ ಪದಗಳು. ಆದರೆ, ಈ ಪದಗಳು ಅಸಂಸದೀಯ ಎಂದಿರುವ ಕೇಂದ್ರ ಸರ್ಕಾರ ಇನ್ನು ಮುಂದೆ ಸಂಸತ್‌ನ ಉಭಯ ಸದನಗಳಲ್ಲಿ ಇವುಗಳನ್ನು ಬಳಸದಂತೆ ಸೂಚಿಸಿದೆ.
‘ಜುಮ್ಲಾಜೀವಿ’, 'ಬಾಲ ಬುದ್ಧಿ', 'ಕೋವಿಡ್ ಸ್ಪ್ರೆಡ್ಡರ್ (ಕೋವಿಡ್ ನಿರ್ವಹಣೆ ಸಂಬಂಧಿಸಿದ ಟೀಕೆ)' 'ಸ್ನೂಪ್‌ಗೇಟ್ (ಪೆಗಾಸಿಸ್ ಹಗರಣ)' ‘ಅಶ್ಶೇಮ್ಡ್ (ನಾಚಿಕೆಗೇಡು)', 'ಅಬ್ಯೂಸ್ಡ್– (ದುರುಪಯೋಗ, ನಿಂದನೆ), 'ಬೆಟ್ರಾಯ್ಡ್ (ದ್ರೋಹ)', ಕರಪ್ಟ್ (ಭ್ರಷ್ಟ)', 'ಡ್ರಾಮ (ನಾಟಕ)', 'ಹಿಪೊಕ್ರಸಿ (ಬೂಟಾಟಿಕೆ)' ಮತ್ತು 'ಇನ್‌ಕಾಂಪೆಟೆಂಟ್ (ಅಸಮರ್ಥ)' 'ಅರಾಜಕತಾವಾದಿ', 'ಶಕುನಿ', 'ಸರ್ವಾಧಿಕಾರಿ', ‘ವಿನಾಶ್ ಪುರುಷ', ಸೇರಿದಂತೆ ಕಲವು ಪದಗಳನ್ನು ಲೋಕಸಭೆ ಮತ್ತು ರಾಜ್ಯಸಭೆಗಳೆಡರಲ್ಲೂ ಅಸಂಸದೀಯ ಎಂದು ಪರಿಗಣಿಸಲಾಗುವುದು ಎಂದು ಸರ್ಕಾರ ಹೊರತಂದಿರುವ ಹೊಸ ಕಿರುಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕ ಡೆರಿಕೆ ಒಬ್ರೆಯನ್, ‘ನಾಚಿಕೆಗೇಡು, ದುರ್ಬಳಕೆ, ನಿಂದಿಸು, ದ್ರೋಹ, ಬೂಟಾಟಿಕೆ, ಭ್ರಷ್ಟ...’ ಇನ್ನುಮುಂದೆ ಸಂಸತ್ತಿನಲ್ಲಿ ಭಾಷಣ ಮಾಡುವಾಗ ನಾವು ಈ ಮೂಲಭೂತ ಪದಗಳನ್ನು ಬಳಸುವಂತಿಲ್ಲ. ಆದರೆ, ನಾನು ಇದನ್ನು ಸಂಸತ್‌ನಲ್ಲಿ ಬಳಸುತ್ತೇನೆ. ಸಾಧ್ಯವಾದರೆ ನನ್ನನ್ನು ಅಮಾನತು ಮಾಡಿ. ಪ್ರಜಾಪ್ರಭುತ್ವದ ಉಳಿವಿಗಾಗಿ ನಾನು ಹೋರಾಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಕೂಡ ‘ಸಾಹೇಬರಿಗೆ ಅವರ ಗುಣಗಳ ಬಗ್ಗೆ ಚೆನ್ನಾಗಿ ಅರಿವಿದೆ’ ಎಂದು ಪರೋಕ್ಷವಾಗಿ ಮೋದಿ ಅವರ ವಿರುದ್ಧ ಕಿಡಿ ಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.