ಮುಂಬೈ:ಭಕ್ತಾದಿಗಳಿಂದ ತೀವ್ರ ಪ್ರತಿಭಟನೆ ಎದುರಾದ ಕಾರಣ ಶಬರಿಮಲೆ ದೇಗುಲ ಪ್ರವೇಶಿಸಲು ಸಾಧ್ಯವಾಗದೆ ಪುಣೆಗೆ ವಾಪಸ್ ಆದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರು ಮುಂದಿನ ಬಾರಿದಿನಾಂಕ ಬಹಿರಂಗಪಡಿಸದೆ ಗೌಪ್ಯವಾಗಿ ಗೆರಿಲ್ಲಾ ತಂತ್ರ ಬಳಸಿದೇವಾಲಯಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
ಪುಣೆ ತಲುಪಿದ ಬಳಿಕ ಮಾತನಾಡಿರುವ ಅವರು,‘ನಾವು ಕೊಚ್ಚಿ ತಲುಪುವ ಮೊದಲೇ ಪ್ರತಿಭಟನಾಕಾರರು ವಿಮಾನ ನಿಲ್ದಾಣದ ಸುತ್ತಲೂ ಜಮಾಯಿಸಿದ್ದರು. ಅವರು ನಮ್ಮನ್ನು ನಿಂದಿಸಲು ಆರಂಭಿಸಿದರು. ವಾಪಸ್ ತೆರಳುವಂತೆ ಬೆದರಿಕೆ ಹಾಕಿದರು. ಏನು ಬೇಕಾದರೂ ಘಟಿಸಬಹುದು ಹಾಗಾಗಿ ವಾಪಸ್ ತೆರಳಿ ಎಂದು ಪೊಲೀಸರೂ ಮನವಿ ಮಾಡಿದರು. ನಮ್ಮಿಂದಾಗಿ ರಾಜ್ಯದಲ್ಲಿ ಜನರಿಗೆ ತೊಂದರೆಯಾಗುವುದು ಇಷ್ಟವಿಲ್ಲ. ಹಾಗಾಗಿ ವಾಪಸ್ ಆಗುವ ನಿರ್ಧಾರ ಮಾಡಿದೆವು. ಪೊಲೀಸರು ಮುಂದಿನ ಬಾರಿ ಸೂಕ್ತ ಭದ್ರತೆ ನೀಡುವ ಭರವಸೆ ನೀಡಿದ್ದಾರೆ. ಈ ಬಾರಿ ನಾವು ಬರುವುದಾಗಿ ತಿಳಿಸಿ ಬಂದಿದ್ದೆವು. ಆದರೆ ಮುಂದಿನ ಸಲ ನಾವು ಬರುವ ಬಗ್ಗೆ ಯಾರಿಗೂ ತಿಳಿಸುವುದಿಲ್ಲ. ಗೆರಿಲ್ಲಾ ತಂತ್ರವನ್ನು ಅನುಸರಿಸುತ್ತೇವೆ’ ಎಂದು ಹೇಳಿದರು.
62 ದಿನಗಳ ಮಂಡಳ ಪೂಜೆ ಮತ್ತು ವ್ರತಾಚರಣೆ ಶನಿವಾರ(ನವೆಂಬರ್ 17)ರಿಂದ ಆರಂಭವಾಗಲಿದೆ. ಹಾಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯದ ಬಾಗಿಲನ್ನು ಶುಕ್ರವಾರ ಸಂಜೆ 5ಕ್ಕೆ ತೆರೆಯಲಾಗಿದೆ. ದೇವಾಲಯವನ್ನು ಪ್ರವೇಶಿಸುವ ಸಲುವಾಗಿಭೂಮಾತಾ ಬ್ರಿಗೇಡ್‌ನ ಸ್ಥಾಪಕಿ ದೇಸಾಯಿ ಸೇರಿ ಒಟ್ಟು ಏಳು ಜನ ಮಹಿಳೆಯರ ತಂಡ ಶುಕ್ರವಾರ ಬೆಳಿಗ್ಗೆ 4.30ಕ್ಕೆ ಕೊಚ್ಚಿ ವಿಮಾನ ನಿಲ್ದಾಣ ತಲುಪಿತ್ತು.
ವಿಮಾನ ನಿಲ್ದಾಣದಿಂದ ಅವರನ್ನು ಕರೆದೊಯ್ಯಲು ಟ್ಯಾಕ್ಸಿ ಚಾಲಕರೂ ನಿರಾಕರಿಸಿದ್ದರು. ಸಂಜೆವರೆಗೆ ಕಾದರೂ ತಂಡವು ವಿಮಾನ ನಿಲ್ದಾಣದಿಂದ ಹೊರಡಲು ಸಾಧ್ಯವಾಗಲೇ ಇಲ್ಲ.ಹೀಗಾಗಿ ದೇವಾಲಯ ಪ್ರವೇಶಿಸುವ ತಮ್ಮ ಯೋಜನೆಯನ್ನು ರದ್ದುಪಡಿಸಿ ಪುಣೆಗೆ ವಾಪಸ್ ಆಗಲು ಅವರು ನಿರ್ಧರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.