ನವದೆಹಲಿ: ‘ದೆಹಲಿಯಾದ್ಯಂತ ಮಂಗಳವಾರ ಬೆಳಿಗ್ಗೆ ಬೀಸಿದ ಬಿರುಗಾಳಿಯಿಂದಾಗಿ ವಾತಾವರಣದಲ್ಲಿ ದಟ್ಟವಾದ ದೂಳು ಆವರಿಸಿತ್ತು. ಇದರಿಂದ ಗಾಳಿಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿತ್ತು. ಗೋಚರತೆಯೂ ಕ್ಷೀಣಿಸಿತ್ತು’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ.
‘ಗಂಟೆಗೆ 30 ರಿಂದ 35 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದರಿಂದಾಗಿ ದೂಳೆಲ್ಲಾ ಮೇಲೆದ್ದು ವಾತಾವರಣ ಕಲುಷಿತಗೊಂಡಿತ್ತು. ಜೊತೆಗೆ ಗೋಚರತೆಯು ಕ್ಷೀಣಿಸಿತ್ತು. ಬೆಳಿಗ್ಗೆ 9 ಗಂಟೆ ವೇಳೆಗೆ ಗಾಳಿಯ ವೇಗ 12 ಕಿ.ಮೀ ಗೆ ತಗ್ಗಿತ್ತು. ಕ್ರಮೇಣ ಅದು ಇನ್ನಷ್ಟು ಕಡಿಮೆಯಾಗಿದ್ದರಿಂದ ವಾತಾವರಣ ತಿಳಿಯಾಗಿತ್ತು’ ಎಂದು ಐಎಂಡಿಯ ಪ್ರಾದೇಶಿಕ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ.
‘ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸನಿಹವಿರುವ ಪಾಲಮ್ ವೀಕ್ಷಣಾಲಯದ ಬಳಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಗೋಚರತೆಯ ಮಟ್ಟವು 1,100 ಮೀಟರ್‌ನಷ್ಟು ದಾಖಲಾಗಿತ್ತು. ಸೋಮವಾರ ಇದೇ ವೇಳೆಗೆ ಈ ಮಟ್ಟವು 4,000 ಮೀಟರ್‌ನಷ್ಟಿತ್ತು’ ಎಂದು ಐಎಂಡಿಯ ಹಿರಿಯ ವಿಜ್ಞಾನಿ ಆರ್.ಕೆ.ಜೆನಾಮಣಿ ತಿಳಿಸಿದ್ದಾರೆ.
‘ದೂಳಿನ ಸಾಂಧ್ರತೆಯು ಹಲವು ಬಾರಿ ಹೆಚ್ಚಳವಾಗಿತ್ತು. ಬೆಳಿಗ್ಗೆ 4 ರಿಂದ 8 ಗಂಟೆ ನಡುವಣ ಅವಧಿಯಲ್ಲಿ ಪರ್ಟಿಕ್ಯುಲೇಟ್ ಮ್ಯಾಟರ್–10ನ ಸಾಂಧ್ರತೆಯು ಒಂದು ಘನ ಮೀಟರ್‌ಗೆ 140 ಮೈಕ್ರೋಗ್ರಾಂನಿಂದ 775 ಮೈಕ್ರೋಗ್ರಾಂಗೆ ಹೆಚ್ಚಳವಾಗಿತ್ತು. ಬಿರುಗಾಳಿ ಬೀಸಿದ್ದರಿಂದಾಗಿ ಈ ಬದಲಾವಣೆ ಉಂಟಾಗಿತ್ತು. ಗಾಳಿ ತಗ್ಗಿದ ಬಳಿಕ ದೂಳು ಕಡಿಮೆಯಾಗಿತ್ತು’ ಎಂದು ಐಎಂಡಿಯ ಪರಿಸರ ನಿಗಾ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ವಿ.ಕೆ.ಸೋನಿ ಹೇಳಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಜನರು ಉಸಿರಾಡುವಾಗ ದೂಳಿನ ಕಣಗಳು ಶ್ವಾಸಕೋಶದೊಳಗೆ ಸೇರಿಕೊಳ್ಳಬಹುದು. ಇದರಿಂದ ಉಸಿರಾಟದ ಸಮಸ್ಯೆ ಉಂಟಾಗಬಹುದು. ಅಸ್ತಮಾ, ಶ್ವಾಸನಾಳಗಳ ಒಳಪೊರೆಯ ಉರಿಯೂತ ಹಾಗೂ ಅಲರ್ಜಿಯಂತಹ ಸಮಸ್ಯೆಗಳೂ ತಲೆದೋರಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಗರಿಷ್ಠ ತಾಪಮಾನ ಕಂಡುಬಂದಿದೆ. 40 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ಉಷ್ಣಾಂಶ ದಾಖಲಾಗಿದೆ. ಇದರಿಂದಾಗಿ ನಗರದಾದ್ಯಂತ ಬಿಸಿಲಿನ ಝಳ ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.