ADVERTISEMENT

ಇಂದಿನಿಂದ ಸಂಸತ್‌ನ ಚಳಿಗಾಲದ ಅಧಿವೇಶನ | ಅದಾನಿ ವಿಷಯ: ಚರ್ಚೆಗೆ ಕಾಂಗ್ರೆಸ್ ಪಟ್ಟು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 0:00 IST
Last Updated 25 ನವೆಂಬರ್ 2024, 0:00 IST
-
-   

ನವದೆಹಲಿ: ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಮಣಿಪುರ ವಿದ್ಯಮಾನ, ಅದಾನಿ ಸಮೂಹದ ವಿರುದ್ಧದ ಆರೋಪಗಳು ಹಾಗೂ ವಾಯುಮಾಲಿನ್ಯ ಕುರಿತು ಚರ್ಚೆ ನಡೆಯಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್‌ ಮುಂದಿಟ್ಟಿದೆ. ಹೀಗಾಗಿ, ಸೋಮವಾರ ಆರಂಭವಾಗಲಿರುವ ಚಳಿಗಾಲದ ಅಧಿವೇಶನ ಕಾವೇರಿದ ಚರ್ಚೆಗಳಿಗೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆಗಳಿವೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್‌ ನಾಯಕರು ಈ ಬೇಡಿಕೆ ಮಂಡಿಸಿದ್ದಾರೆ.

ಕಾಂಗ್ರೆಸ್‌ನ ಈ ಬೇಡಿಕೆಗೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, ‘ಸದನಗಳಲ್ಲಿ ಯಾವ ವಿಷಯ ಕುರಿತು ಚರ್ಚೆ ನಡೆಸಬೇಕು ಎಂಬ ಬಗ್ಗೆ ಸಂಬಂಧಪಟ್ಟ ಕಲಾಪ ಸಲಹಾ ಸಮಿತಿಯು ಕಾರ್ಯಸೂಚಿ ಪ್ರಕಾರ ನಿರ್ಧರಿಸಲಿದೆ. ಅಧಿವೇಶನ ಸುಸೂತ್ರವಾಗಿ ನಡೆಯಲು ಎಲ್ಲ ಪಕ್ಷಗಳು ಸಹಕರಿಸಬೇಕು’ ಎಂದು ಕೋರಿದರು.

ADVERTISEMENT

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ಸಂಸದ ಪ್ರಮೋದ್‌ ತಿವಾರಿ, ‘ಗೌತಮ್‌ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ ಹೊರಿಸಿರುವ ಲಂಚದ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವಂತೆ ಅಧಿವೇಶನಕ್ಕೂ ಮುಂಚೆಯೇ ಪಕ್ಷವು ಸರ್ಕಾರವನ್ನು ಒತ್ತಾಯಿಸಿತ್ತು’ ಎಂದರು.

ಅಧಿವೇಶನದಲ್ಲಿ ಈ ವಿಚಾರವಾಗಿ ಸರ್ಕಾರ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು.

‘ಮಣಿಪುರದಲ್ಲಿ ಪರಿಸ್ಥಿತಿ ಸಂಪೂರ್ಣ ಕೈಮೀರಿ ಹೋಗುತ್ತಿದೆ. ಅಲ್ಲಿನ ಸಮಸ್ಯೆ ಬಗೆಹರಿಸಲು ಈ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ‘ವಿಭಜಿಸು ಹಾಗೂ ಕೊಲ್ಲು’ ಎಂಬುದು ಈ ಸರ್ಕಾರದ ಮಂತ್ರವಾಗಿದೆ’ ಎಂದ ಅವರು, ಮಣಿಪುರ ವಿದ್ಯಮಾನಗಳ ಬಗ್ಗೆಯೂ ಚರ್ಚೆ ನಡೆಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ಧೇವೆ ಎಂದರು.

‘ನಿರುದ್ಯೋಗ ಹೆಚ್ಚಳ ಹಾಗೂ ಉತ್ತರ ಭಾರತದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಬಗ್ಗೆಯೂ ಚರ್ಚೆಗೆ ಒತ್ತಾಯಿಸಿದೆವು’ ಎಂದರು.

ಕಾಂಗ್ರೆಸ್‌ ಬೇಡಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ರಿಜಿಜು, ‘ಲೋಕಸಭಾ ಸ್ಪೀಕರ್ ಹಾಗೂ ರಾಜ್ಯಸಭಾ ಸಭಾಪತಿ ಅವರ ಅನುಮತಿಯೊಂದಿಗೆ ಯಾವ ವಿಷಯಗಳ ಕುರಿತು ಚರ್ಚೆ ಕೈಗೆತ್ತಿಕೊಳ್ಳಬೇಕು ಎಂಬ ಬಗ್ಗೆ ಕಲಾಪ ಸಲಹಾ ಸಮಿತಿ ತೀರ್ಮಾನಿಸಲಿದೆ’ ಎಂದರು.

ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಕಾನೂನು ಸಚಿವ ಅರ್ಜುನ್‌ ಮೇಘವಾಲ್, ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಲ್‌.ಮುರುಗನ್, ಕಾಂಗ್ರೆಸ್‌ನ ರಾಜ್ಯ ಸಭಾ ಸದಸ್ಯರಾದ ಜೈರಾಮ್‌ ರಮೇಶ್, ಲೋಕಸಭಾ ಸದಸ್ಯರಾದ ಗೌರವ್‌ ಗೊಗೋಯಿ, ಕೆ.ಸುರೇಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಟಿಎಂಸಿ ಸದಸ್ಯರು ಗೈರಾಗಿದ್ದರೆ, ಸಿಪಿಐನ ರಾಜ್ಯಸಭಾ ಸದಸ್ಯ ಪಿ.ಸಂತೋಷಕುಮಾರ್ ಪಾಲ್ಗೊಂಡಿದ್ದರು.

‘ಪ್ರಸ್ತಾಪ’: ಕೇರಳ ಕುರಿತು ಕೇಂದ್ರ ಸರ್ಕಾರ ತೋರುತ್ತಿರುವ ತಾರತಮ್ಯ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಸಿಪಿಐ ಪ್ರಕಟಣೆಯಲ್ಲಿ ತಿಳಿಸಿದೆ.

26ಕ್ಕೆ ಸಂವಿಧಾನ ದಿನ
ಸಂಸತ್‌ನ ಚಳಿಗಾಲದ ಅಧಿವೇಶನ ಡಿ.20ರ ವರೆಗೆ ನಡೆಯಲಿದೆ. ನ.26ರಂದು ಸಂವಿಧಾನ ದಿನ ಆಚರಿಸಲಾಗುತ್ತದೆ. ಈ ಅಂಗವಾಗಿ ಸಂವಿಧಾನ ಸದನದ ಸೆಂಟ್ರಲ್‌ ಹಾಲ್‌ನಲ್ಲಿ ಉಭಯ ಸದನಗಳ ಜಂಟಿ ಅಧಿವೇಶನ ನಡೆಯಲಿದೆ. ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಸೇರಿದಂತೆ 16 ಮಸೂದೆಗಳನ್ನು ಕೇಂದ್ರ ಮಂಡಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.