ADVERTISEMENT

ದುರ್ಬಲರಾದ ನಿತೀಶ್‌: ಸರ್ಕಾರದ ಸೂತ್ರ ಈಗ ಬಿಜೆಪಿ ಕೈಲಿ

ಅಭಯ್ ಕುಮಾರ್
Published 16 ನವೆಂಬರ್ 2020, 7:17 IST
Last Updated 16 ನವೆಂಬರ್ 2020, 7:17 IST
ಸಸಾರಂನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ಮತ್ತು ಜನತಾದಳ (ಯುನೈಟೆಡ್) ಅಧ್ಯಕ್ಷ ನಿತೀಶ್ ಕುಮಾರ್ (ಪಿಟಿಐ)
ಸಸಾರಂನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ಮತ್ತು ಜನತಾದಳ (ಯುನೈಟೆಡ್) ಅಧ್ಯಕ್ಷ ನಿತೀಶ್ ಕುಮಾರ್ (ಪಿಟಿಐ)   

ಪಟ್ನಾ: ವಿಧಾನಸಭೆ ಚುನಾವಣೆ ಗೆಲುವಿನ ನಂತರ ಎನ್‌ಡಿಎ ಮೈತ್ರಿಕೂಟದ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಿ ಜೆಡಿಯು ನಾಯಕ ನಿತೀಶ್‌ ಕುಮಾರ್‌ ನಿವಾಸದಲ್ಲಿ ಮೈತ್ರಿಕೂಟದ ನಾಯಕರು ಸಭೆ ಸೇರಿದ್ದರು. '1, ಅನಿ ಮಾರ್ಗ್‌'ನ ಅಧಿಕೃತ ನಿವಾಸದಲ್ಲಿ ನಡೆದ ಸಭೆಯಲ್ಲಿ ನಿತೀಶ್‌ ಅವರ ಎಡ ಬಲದಲ್ಲಿ ಕಾಣಿಸಿಕೊಂಡವರು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಮತ್ತು ಬಿಹಾರದ ಜೆಡಿಯು ಅಧ್ಯಕ್ಷ ವಸಿಷ್ಠ ನಾರಾಯಣ್‌ ಸಿಂಗ್‌. ಆದರೆ, ಅವರ ಬಹುಕಾಲದ ಸಂಪುಟ ಸಹೋದ್ಯೋಗಿ, ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಮೋದಿಗೆ ಅಲ್ಲಿ ಜಾಗವಿರಲಿಲ್ಲ.

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದು ನಿತೀಶ್‌ ಮುಖ್ಯಮಂತ್ರಿ ಅದಾಗಿನಿಂದ (2005-2020ರ ವರೆಗೆ. 2013-2017ರ ಅವಧಿ ಹೊರತುಪಡಿಸಿ) ನಿತೀಶ್ ಅವರ ನೆರಳಾಗಿ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದದ್ದು ಇದೇ ಸುಶೀಲ್‌ ಕುಮಾರ್‌ ಮೋದಿ.

ಮೈತ್ರಿಕೂಟದ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ನಂತರ, ಸರ್ಕಾರ ರಚನೆಯ ಹಕ್ಕು ಮಂಡಿಸಲು ನಿತೀಶ್‌ ಕುಮಾರ್‌ ರಾಜಭವನದ ಕಡೆಗೆ ಹೊರಟರು. ಆದರೆ, ಅವರೊಂದಿಗೆ ಸುಶೀಲ್‌ ಮೋದಿ ಇರಲಿಲ್ಲ. 2005ರಿಂದ ಈ ವರೆಗಿನ ಎನ್‌ಡಿಎ ಸರ್ಕಾರಗಳ ರಚನೆಯ ಹಕ್ಕು ಮಂಡನೆ ವೇಳೆ ನಿತೀಶ್ ಜೊತೆಗೇ ಇರುತ್ತಿದ್ದ ಸುಶೀಲ್‌ ಇದೇ ಮೊದಲ ಬಾರಿಗೆ ನಿತೀಶ್‌ಗೆ ಜೋಡಿಯಾಗಿರಲಿಲ್ಲ.

ADVERTISEMENT

ಬಿಹಾರದಲ್ಲಿ ನಿತೀಶ್‌ ಮತ್ತು ಸುಶೀಲ್‌ ಮೋದಿ ಅವರನ್ನು ಜನ ಪ್ರೀತಿಯಿಂದ 'ರಾಮ-ಲಕ್ಷ್ಮಣ' ಎಂದು ಕರೆಯುತ್ತಾರೆ. ಆದರೆ, ಈ ಜೋಡಿಯನ್ನೇ ಬೇರ್ಪಡಿಸುವಲ್ಲಿ ಬಿಜೆಪಿಯ ಹೈಕಮಾಂಡ್‌ ಈ ಬಾರಿ ಯಶಸ್ವಿಯಾಗಿದೆ. ಬಿಹಾರದಲ್ಲಿ ಸರ್ಕಾರ ರಚನೆ ಕಾರ್ಯ ಸಾಂಗವಾಗಿ ನಡೆಯಲು ನೆರವಾಗುವಂತೆ ಕೇಂದ್ರದಿಂದ ವೀಕ್ಷಕರಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ನಿಯೋಜನೆಗೊಂಡಿದ್ದರು. ಸುಶೀಲ್‌ ಮೋದಿ ಅವರನ್ನು ತಮ್ಮೊಂದಿಗೆ ಉಳಿಸಿಕೊಡುವಂತೆ ನಿತೀಶ್‌ ಕುಮಾರ್‌ ರಾಜನಾಥ್‌ ಸಿಂಗ್‌ ಅವರನ್ನು ಕೇಳಿಕೊಂಡಿದ್ದಾರೆ. ಆದರೆ, ಬಿಜೆಪಿ ಹೈಕಮಾಂಡ್‌ ಇದಕ್ಕೆ ಒಪ್ಪಿಲ್ಲ.

ಇದು ಒಂದು ಭಾಗವಾದರೆ, ಚುನಾವಣೆಯಲ್ಲಿ ಜೆಡಿಯುಗಿಂತಲೂ 31 ಹೆಚ್ಚುವರಿ ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಸರ್ಕಾರದಲ್ಲಿ ತನ್ನ ಹಿಡಿತ ಬಲಗೊಳಿಸಿರುವುದು ಸ್ಪಷ್ಟವಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ತಾರಕಿಶೋರ್‌ ಪ್ರಸಾದ್‌ ಭಾನುವಾರ ರಾತ್ರಿ, ಬಿಹಾರ ಬಿಜೆಪಿ ಉಸ್ತುವಾರಿ ಭೂಪೇಂದ್ರ ಯಾದವ್‌ ಅವರೊಂದಿಗೆ ನಿತೀಶ್‌ ಕುಮಾರ್‌ ಅವರನ್ನು ಭೇಟಿಯಾಗಿದ್ದರು. ಸರ್ಕಾರದಲ್ಲಿ ಬಿಜೆಪಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೊಂದಿರುವುದಾಗಿಯೂ, ಮಂತ್ರಮಂಡಲದಲ್ಲಿ ಬಿಜೆಪಿಯೇ ಹೆಚ್ಚಿನ ಸ್ಥಾನಗಳನ್ನು ಹೊಂದಿರುವಾಗಿಯೂ ಈ ಸಭೆಯಲ್ಲಿ ನಿರ್ಣಯಿಸಲಾಗಿದೆ.

2005ರಲ್ಲಿ ಎನ್‌ಡಿಎ ಬಿಹಾರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಇದುವರೆಗೆ ಕೂಟದಲ್ಲಿ 'ಹಿರಿಯಣ್ಣ'ನ ಪಾತ್ರ ನಿರ್ವಹಿಸಿದ್ದ ನಿತೀಶ್‌ಗೆ ಈಗ ಆಸ್ಥಾನ ಉಳಿದಂತೆ ಇಲ್ಲ. 'ಬಿಜೆಪಿ ನಿತೀಶ್ ಬಾಹುಬಲ ಕಸಿದಿದೆ. ಅವರ ಶಕ್ತಿಯನ್ನು ಹೀರಿ ಅವರಿಗಿಂತ ಹಿರಿದಾಗಿ ಬೆಳೆದಿದೆ. ಕುತೂಹಲಕಾರಿ ಅಂಶವೆಂದರೆ, ಇದೇ ತಂತ್ರವನ್ನೇ ನಿತೀಶ್‌ ಬಳಕೆ ಮಾಡಿ ಬೆಳೆದಿದ್ದೂ ಕೂಡ' ಎಂದು ಖ್ಯಾತ ರಾಜಕೀಯ ಚಿಂತಕ ಅಜಯ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

'ಕಳೆದ ಕೆಲವು ತಿಂಗಳಿಂದ ನಿತೀಶ್ ಅವರನ್ನು ದುರ್ಬಲಗೊಳಿಸಲು ಬಿಜೆಪಿ ವರಿಷ್ಠರು ಪ್ರಯತ್ನ ನಡೆಸುತ್ತಿದ್ದರು. ವಿಷಾದಕರ ಸಂಗತಿಯೆಂದರೆ, ನಿತೀಶ್‌ಗೆ ಅದನ್ನು ಗ್ರಹಿಸಲಾಗಲಿಲ್ಲ. ಉತ್ತಮ ಕಾರ್ಯತಂತ್ರದೊಂದಿಗೆ ಹೆಣೆದ ಬಲೆಯೊಳಗೆ ಅವರು ಈಗ ಬಂಧಿಯಾಗಿದ್ದಾರೆ,' ಎಂದು ಅಜಯ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.