ಪಟ್ನಾ: ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಅವರು ತಮ್ಮ ‘ಜನ ಸುರಾಜ್’ ಪಕ್ಷವನ್ನು ಬುಧವಾರ ಘೋಷಿಸಿದ್ದು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಮನೋಜ್ ಭಾರ್ತಿ ಅವರನ್ನು ನೇಮಿಸಲಾಗಿದೆ.
ಭಾರ್ತಿ ಅವರು ಜನ ಸುರಾಜ್ ಪಕ್ಷದ ದಲಿತ ಮುಖವಾಗಿದ್ದಾರೆ. ‘ಭಾರತೀಯ ವಿದೇಶಾಂಗ ಸೇವೆ ನಿವೃತ್ತ ಅಧಿಕಾರಿ ಭಾರ್ತಿ ಅವರು ಮಾರ್ಚ್‌ವರೆಗೆ ಮಾತ್ರವೇ ಕಾರ್ಯಾಧ್ಯಕ್ಷರಾಗಿ ಇರಲಿದ್ದಾರೆ. ಪಕ್ಷದ ಆಂತರಿಕ ಚುನಾವಣೆಯ ಬಳಿಕ ಪೂರ್ಣ ಸ್ವರೂಪದ ಅಧ್ಯಕ್ಷರು ಆಯ್ಕೆಯಾಗಲಿದ್ದಾರೆ’ ಎಂದು ಕಿಶೋರ್ ತಿಳಿಸಿದರು.
ಪಟ್ನಾದ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ದೇವೇಂದ್ರ ಪ್ರಸಾದ್ ಯಾದವ್, ರಾಜಕಾರಣಿ ಪವನ್ ವರ್ಮಾ ಹಾಗೂ ಮಾಜಿ ಸಂಸದ ಮೊನಾಜೈರ್ ಹಸ್ಸನ್ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.
‘ಅಧಿಕಾರದಾಸೆ ಇಲ್ಲ’: ಪ್ರಶಾಂತ್ ಕಿಶೋರ್ ಅವರೇ ಪಕ್ಷದ ಅಧ್ಯಕ್ಷರಾಗಲಿದ್ದಾರೆ ಮತ್ತು ಅವರು ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿಕೊಳ್ಳಲಿದ್ದಾರೆ ಎಂದು ಕಿಶೋರ್ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ‘ನನಗೆ ಅಧಿಕಾರದಾಸೆಯಿಲ್ಲ’ ಎಂದ ಅವರು, ‘ಜೆಡಿಯು, ಬಿಜೆಪಿ ಹಾಗೂ ಆರ್‌ಜೆಡಿಗೆ ಪ್ರರ್ಯಾಯವಾಗಿ ಜನ ಸುರಾಜ್ ಪಕ್ಷವನ್ನು ಕಟ್ಟುವ ಕಾರ್ಯತಂತ್ರಜ್ಞನಾಗಿರಲು ನಾನು ಬಯಸಿದ್ದೇನೆ. 2025ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 243 ಕ್ಷೇತ್ರಗಳಲ್ಲಿಯೂ ಪಕ್ಷವು ಸ್ಪರ್ಧಿಸಲಿದೆ’ ಎಂದರು.
‘ಹೆಚ್ಚಿನ ನಿರೀಕ್ಷೆ ಇಲ್ಲ’
ತಾವು ಪಕ್ಷ ಆರಂಭಿಸುವುದರಿಂದಾಗಿ ಬಿಹಾರ ರಾಜಕಾರಣದಲ್ಲಿ ಬಿರುಗಾಳಿ ಏಳಬಹುದು ಎಂಬ ನಿರೀಕ್ಷೆಯಲ್ಲಿ ಕಿಶೋರ್ ಇದ್ದಾರೆ. ಆದರೆ ರಾಜಕೀಯ ವಿಶ್ಲೇಷಕರು ಮಾತ್ರ ಕಿಶೋರ್ ಅವರ ಈ ಪಕ್ಷದಿಂದ ಹೆಚ್ಚಿನ ನಿರೀಕ್ಷೆಯನ್ನು ವ್ಯಕ್ತಪಡಿಸಿಲ್ಲ. ‘ತಮ್ಮನ್ನು ತಾವು ಕಾರ್ಯತಂತ್ರಜ್ಞ ಎಂದು ಘೋಷಿಸಿಕೊಂಡು ಬಿಹಾರ ರಾಜಕಾರಣಕ್ಕೆ ಹೊಸಬರಾಗಿರುವ ವ್ಯಕ್ತಿಯನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿರುವುದು ಕಿಶೋರ್ ಅವರ ಮೊದಲ ಪ್ರಮಾದ. ನಿತೀಶ್ ತೇಜಸ್ವಿ ಅವರಿಗೆ ಸವಾಲು ಒಡ್ಡಬೇಕು ಎಂದಾದರೆ ಅವರೇ ಮುಂದಾಳತ್ವವಹಿಸಿಕೊಳ್ಳಬೇಕು. ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಬೇಕು. ಈ ರೀತಿಯಲ್ಲಿ ಹಿಂದೆ ನಿಂತು ಹೋರಾಟ ನಡೆಸುವುದರಿಂದ ಪ್ರಯೋಜನವಿಲ್ಲ’ ಎಂದು ರಾಜಕೀಯ ವಿಶ್ಲೇಷಕ ಗಿರಿಧರ್ ಝಾ ಅಭಿಪ್ರಾಯಪಟ್ಟರು. ‘ನಿತೀಶ್ ಸರ್ಕಾರದ ಶವ ಪೆಟ್ಟಿಗೆಯ ಕೊನೆಯ ಮೊಳೆಗಳು’ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವು ಮೂರು ‘ಎಸ್’ ವಿಷಯಗಳನ್ನು ಮುಂದಿಟ್ಟುಕೊಂಡು ಸ್ಪರ್ಧಿಸಲಿದೆ. 1) ಶರಾಬ್ (ಮದ್ಯ) 2) ಸಮೀಕ್ಷೆ (ಚಾಲ್ತಿಯಲ್ಲಿರುವ ಭೂ ಸಮೀಕ್ಷೆ) 3) ಸ್ಮಾರ್ಟ್ ಮೀಟರ್ (ಎಲೆಕ್ಟ್ರಾನಿಕ್ ಮೀಟರ್ ಬದಲಾಗಿ ಸ್ಥಾಪಿಸಲಾಗಿರುವ ವಿದ್ಯುತ್ ಮೀಟರ್) ಈ ಮೂರೂ ‘ಎಸ್’ಗಳು ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರದ ಶವ ಪೆಟ್ಟಿಗೆಗೆ ಅಂತಿಮ ಮೊಳೆಗಳು ಎಂದು ಸಾಬೀತುಪಡಿಸುತ್ತವೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.