ADVERTISEMENT

ಮುಂಬೈ: ಕೋವಿಡ್‌ ರೋಗಿಗಳಿಗೆ ಪ್ರತಿಕಾಯ ಕಾಕ್‌ಟೈಲ್ ಚಿಕಿತ್ಸೆ ಯಶಸ್ವಿ

ಸೌಮ್ಯ ಸೋಂಕಿನ ಲಕ್ಷಣಗಳಿರುವ, ವಿವಿಧ ರೋಗಗಳ ಇತಿಹಾಸವಿರುವ ರೋಗಿಗಳಿಗೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 6:14 IST
Last Updated 14 ಜೂನ್ 2021, 6:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಇಲ್ಲಿನ ಮೀರಾ ರಸ್ತೆಯ ವೋಕ್‌ಹಾರ್ಡ್ ಆಸ್ಪತ್ರೆಯ ವೈದ್ಯರು, ಇತರೆ ಬೇರೆ ಬೇರೆ ಕಾಯಿಲೆಗಳನ್ನು ಹೊಂದಿರುವ ಕೋವಿಡ್‌ 19 ಸೋಂಕಿತ ಇಬ್ಬರು ರೋಗಿಗಳಿಗೆ ‘ಪ್ರತಿಕಾಯ ಕಾಕ್‌ಟೈಲ್‌ ಚಿಕಿತ್ಸೆ (ಆಂಟಿಬಾಡಿ ಕಾಕ್‌ಟೈಲ್ ಥೆರಪಿ)‘ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ರೋಗಿಗಳಿಗೆ ಇಂಟರ್‌ವೀನಸ್‌ (ಐವಿ) ಮೂಲಕ ಒಂದು ಡೋಸ್‌ ಆಂಟಿವೈರಲ್ ಕಾಕ್‌ಟೈಲ್‌ ಔಷಧವನ್ನು ನೀಡಲಾಗಿದೆ. ಔಷಧ ಪಡೆದ ನಂತರ ಇಬ್ಬರ ಆರೋಗ್ಯ ಸ್ಥಿರವಾಗಿದೆ.

ಸೌಮ್ಯ ಕೊರೊನಾ ಸೋಂಕಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಮೇ ತಿಂಗಳಲ್ಲಿ ’ಮೊನೊಕ್ಲೋನಲ್ ಆಂಟಿಬಾಡಿ ಕಾಕ್‌ಟೈಲ್’ ಚಿಕಿತ್ಸೆಯನ್ನು ಭಾರತದಲ್ಲಿ ಅನುಮೋದಿಸಲಾಗಿದೆ.

ADVERTISEMENT

ಕಳೆದ ವರ್ಷ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇದೇ ರೀತಿ ಇಂಟರ್‌ವೀನಸ್‌ ಮೂಲಕ ಆಂಟಿವೈರಲ್ ಔಷಧ ನೀಡಲಾಗಿತ್ತು. ಕೋವಿಡ್ ರೋಗಿಗಳಿಗೆ ಈ ಚಿಕಿತ್ಸೆ ಒಂದು ರೀತಿಯ ವರವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.

60 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಇಬ್ಬರು ಮಹಿಳಾ ಕೋವಿಡ್‌–19ರೋಗಿಗಳಿಗೆ ಈ ಚಿಕಿತ್ಸೆ ನೀಡಲಾಗಿದೆ. ಮಧುಮೇಹ, ಮೂತ್ರಪಿಂಡ ತೊಂದರೆ ಮತ್ತು ಅತಿ ಹೆಚ್ಚು ರಕ್ತದೊಡದಿಂದ ಬಳಲುತ್ತಿದ್ದ ಇವರನ್ನು ಮೇ ತಿಂಗಳಲ್ಲಿರುವ ಮೀರಾ ರಸ್ತೆಯ ವಕಾರ್ಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರೋಗಿಗಳಿಗೆ ’ಆಂಟಿಬಾಡಿ ಕಾಕ್‌ಟೈಲ್ ಚಿಕಿತ್ಸೆ’ ನೀಡುವ ಕುರಿತು ಕುಟುಂಬದ ಸದಸ್ಯರು ಮತ್ತು ರೋಗಿಗಳೊಂದಿಗೆ ಚರ್ಚಿಸಿ, ನಂತರ ಈ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಪಡೆದ ಇಬ್ಬರು ರೋಗಿಗಳಲ್ಲಿ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇನ್ನೊಬ್ಬರು ತ್ವರಿತಗತಿಯಲ್ಲಿ ಗುಣಮುಖರಾಗುತ್ತಿದ್ದಾರೆ. ಅವರನ್ನು ಶೀಘ್ರದಲ್ಲೇ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತದೆ.

‘65 ವರ್ಷಕ್ಕಿಂತ ಮೇಲ್ಪಟ್ಟವರು, ಮನೆಯಲ್ಲೇ ಪ್ರತ್ಯೇಕವಾಗಿದ್ದು, ಆಮ್ಲಜನಕ ಮಟ್ಟ 93ಕ್ಕೂ ಹೆಚ್ಚು ಇರುವವರಿಗೆ ‘ಆಂಟಿ ಬಾಡಿ ಕಾಕ್‌ಟೇಲ್ ಥೆರಪಿ‘ ಸೂಕ್ತ. ಆದರೆ, ಈ ಚಿಕಿತ್ಸೆ ಪಡೆಯುವ ರೋಗಿಗಳಲ್ಲಿ ಮಧುಮೇಹ, ಯಕೃತ್, ಹೃದಯ ಸಂಬಂಧಿ ತೊಂದರೆ ಹಾಗೂ ದೀರ್ಘಕಾಲೀನ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿದ್ದಲ್ಲಿ, ಅವರಿಗೆ ತೀವ್ರ ಸ್ವರೂಪದ ಸೋಂಕು ಕಾಣಿಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆ‘ ಎಂದು ತಜ್ಞ ವೈದ್ಯ ಡಾ. ಜಿನೇಂದ್ರ ಜೈನ್ ವಿವರಿಸಿದ್ದಾರೆ.

‘ಮಾನೊಕ್ಲೋನಲ್ ಪ್ರತಿಕಾಯಗಳನ್ನು ಕೋವಿಡ್‌ ಸೋಂಕಿನಿಂದ ಗುಣಮುಖರಾದವರಿಂದ ತೆಗೆದುಕೊಳ್ಳುವ ಪ್ಲಾಸ್ಮಾದಿಂದ ಸಂಗ್ರಹಿಸಲಾಗುತ್ತದೆ. ಕಾಸಿರಿವಿಂಬ ಮತ್ತು ಇಮ್‌ಡೆವಿಂಬ ಎಂಬುದು ಮಾನೊಕ್ಲೋನಲ್ ಪ್ರತಿಕಾಯಗಳು. ಇವೆರಡನ್ನೂ ಮಿಶ್ರಮಾಡಿ ಇಂಟ್ರಾವೀನಸ್ ಮೂಲಕ ರೋಗಿಯ ದೇಹಕ್ಕೆ ನೀಡಲಾಗುತ್ತದೆ. ಇದನ್ನೇ ಕಾಕ್‌ಟೈಲ್ ಚಿಕಿತ್ಸೆ ಎನ್ನುವುದು. ಈ ಪ್ರತಿಕಾಯಗಳು ಕೋವಿಡ್‌ ಸೋಂಕಿತರ ದೇಹದಲ್ಲಿ ಸಾರ್ಸ್‌–ಕೋವ್‌–2 ವೈರಸ್‌ನ ಪ್ರೊಟಿನ್‌ ಏರಿಕೆಯಾಗುವುದನ್ನು ತಡೆದು, ಆ ವೈರಸ್ ಜೀವಕೋಶದೊಳಗೆ ಸೇರುವುದನ್ನೂ ನಿಗ್ರಹಿಸುತ್ತದೆ‘ ಎಂದು ಜಿನೇಂದ್ರ ವಿವರಿಸಿದರು.

‘ಕೋವಿಡ್‌ ರೋಗಿಗಳಿಗೆ ಕಾಕ್‌ಟೈಲ್ ಚಿಕಿತ್ಸೆಯ ಇಂಜೆಕ್ಷನ್ ನೀಡಿದ ನಂತರ, ಏನಾದರೂ ಪರಿಣಾಮ ಉಂಟಾಗಬಹುದೇ ಎಂದು ಪರೀಕ್ಷಿಸಲು, ಒಂದು ಗಂಟೆ ಕಾಲ ರೋಗಿಯ ಬಗ್ಗೆ ನಿಗಾವಹಿಸಲಾಗುತ್ತದೆ‘ ಎಂದರು.

‘ಈ ಚಿಕಿತ್ಸೆ, ಸೋಂಕು ಗಂಭೀರವಾಗುವುದನ್ನು ಕಡಿಮೆಗೊಳಿಸುತ್ತದೆ‘ ಎಂದು ಜೈನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.