ADVERTISEMENT

ಮಣಿಪುರ: ಮಹಿಳೆಗೆ ಗುಂಡಿಕ್ಕಿ, ಬೆಂಕಿ ಹಚ್ಚಿ ಹತ್ಯೆ

ಮೈತೇಯಿ ಸಮುದಾಯದ ಕೃತ್ಯ ಎಂದು ಆರೋಪಿಸಿದ ಕುಕಿ ಸಮುದಾಯ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 16:08 IST
Last Updated 8 ನವೆಂಬರ್ 2024, 16:08 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಗುವಾಹತಿ: ಮಣಿಪುರದ ಸಂಘರ್ಷ ಪೀಡಿತ ಜಿರೀಬಾಮ್‌ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಶಸ್ತ್ರಸಜ್ಜಿತ ವ್ಯಕ್ತಿಗಳು ಹಮಾರ್‌ ಸಮುದಾಯದಕ್ಕೆ ಸೇರಿದ ಮಹಿಳೆಯೊಬ್ಬರಿಗೆ ಗುಂಡಿಕ್ಕಿ, ನಂತರ ಆಕೆಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ADVERTISEMENT

ಹತ್ಯೆಯಾದವರನ್ನು ಝೊಸಾಂಗ್‌ಕಿಮ್‌ ಎಂದು ಗುರುತಿಸಲಾಗಿದ್ದು, ಶಿಕ್ಷಕಿಯಾಗಿರುವ ಅವರಿಗೆ ಮೂವರು ಮಕ್ಕಳಿದ್ದಾರೆ.  

‘ಗುರುವಾರ ರಾತ್ರಿ ಅಪರಿಚಿತ ವ್ಯಕ್ತಿಗಳು ಜಿಲ್ಲೆಯ ಝೈರಾವನ್‌ ಗ್ರಾಮಕ್ಕೆ ಗುಂಡಿನ ದಾಳಿ ನಡೆಸಿದ್ದಲ್ಲದೇ, ಹಲವು ಮನೆಗಳಿಗೆ ಬೆಂಕಿಯನ್ನೂ ಹಚ್ಚಿದ್ದಾರೆ. ಸುಟ್ಟುಕರಕಲಾಗಿದ್ದ ಮಹಿಳೆಯ ದೇಹವನ್ನು ಸ್ಥಳೀಯ ಸಂಘಟನೆಗಳು ಹೊರತೆಗೆದಿವೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಹಮಾರ್‌ ಸಮುದಾಯವು ಜನಾಂಗೀಯವಾಗಿ ಕುಕಿ–ಝೋ ಬುಡಕಟ್ಟು ಸಮುದಾಯದೊಂದಿಗೆ ಗುರುತಿಸಿಕೊಂಡಿದೆ. 

‘ಮೈತೇಯಿ ಸಮುದಾಯಕ್ಕೆ ಸೇರಿದ ಶಸ್ತ್ರಸಜ್ಜಿತ ಜನರ ಗುಂಪು ಜಿರೀಬಾಮ್‌ ಜಿಲ್ಲೆಯ ಝೈರಾವನ್‌ ಗ್ರಾಮಕ್ಕೆ ನುಗ್ಗಿ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದೆ’ ಎಂದು ಕುಕಿ–ಝೋ ಸಮುದಾಯದ ಸಂಘಟನೆಯಾದ ಸ್ಥಳೀಯ ಬುಡಕಟ್ಟು ಮುಖಂಡರ ವೇದಿಕೆ (ಐಟಿಎಲ್‌ಎಫ್‌) ಹೇಳಿಕೆಯಲ್ಲಿ ತಿಳಿಸಿದೆ. 

‘ಬಹುತೇಕ ಗ್ರಾಮಸ್ಥರು ಪಕ್ಕದ ಅರಣ್ಯದತ್ತ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, 31 ವರ್ಷದ ಮಹಿಳೆಯನ್ನು ಸೆರೆಹಿಡಿದ ಮೈತೇಯಿ ಉಗ್ರರು ಆಕೆಯ ಮೇಲೆ ಅತ್ಯಾಚಾರ ಎಸಗಿ ನಂತರ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ’ ಎಂದು ಗ್ರಾಮಸ್ಥರ ಹೇಳಿಕೆಯನ್ನು ಉಲ್ಲೇಖಿಸಿ ಐಟಿಎಲ್‌ಎಫ್‌ ಹೇಳಿದೆ.  

‘ದಾಳಿ ನಡೆಸಿದ ಸಂದರ್ಭದಲ್ಲಿ ಗುಂಡು ಮಹಿಳೆಯ ತೊಡೆಗೆ ತಾಗಿತ್ತು. ಆಕೆಯ ಪತಿ ಪೋಷಕರು ಹಾಗೂ ಮೂವರು ಮಕ್ಕಳೊಂದಿಗೆ ಅಲ್ಲಿಂದ ಓಡಿ ಹೋದರು. ಆದರೆ, ದಾಳಿಕೋರರು ಆಕೆಯನ್ನು ಹಿಡಿದರು’ ಎಂದು ಆಕೆಯ ಪತಿ ಮಾಹಿತಿ ನೀಡಿರುವುದಾಗಿ ಸಂಘಟನೆ ತಿಳಿಸಿದೆ. 

ಆದರೆ, ಈ ಘಟನೆ ಬಗ್ಗೆ ಮಣಿಪುರ ಪೊಲೀಸರು ಈವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ.

ಮಣಿಪುರ ರಾಜ್ಯದಲ್ಲಿ ಕಳೆದ ವರ್ಷದ ಮೇ ತಿಂಗಳಲ್ಲಿ ಆರಂಭವಾಗಿರುವ ಮೈತೇಯಿ–ಕುಕಿ ಸಮುದಾಯಗಳ ನಡುವಿನ ಸಂಘರ್ಷ ಇನ್ನೂ ಮುಂದುವರಿದಿದೆ. ಸಂಘರ್ಷದಲ್ಲಿ 240 ಮಂದಿ ಮೃತಪಟ್ಟಿದ್ದು, 60 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.