ADVERTISEMENT

16 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದವ ವಿವಾಹ ಪ್ರಸ್ತಾಪದಿಂದ ಸಿಕ್ಕಿಬಿದ್ದ!

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 10:31 IST
Last Updated 30 ನವೆಂಬರ್ 2019, 10:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೋಪಾಲ್:ಕೊಲೆ ಪ್ರಕರಣ ಸೇರಿ ವಿವಿಧ 16 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯನ್ನು ನಕಲಿ ವಿವಾಹದ ನೆಪವೊಡ್ಡಿ ಗುರುವಾರ ಮಧ್ಯಪ್ರದೇಶದ ಚತ್ತಾರ್‌ಪುರ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಮಹೂಬಾ ಜಿಲ್ಲೆಯ ಬಿಜೌರಿ ಗ್ರಾಮದ ನಿವಾಸಿಯಾಗಿದ್ದ ಬಾಲಕಿಶನ್ ಚೌಬೆ ಎಂಬಾತನನ್ನು ಹುಡುಕಿ ಕೊಟ್ಟವರಿಗೆ 10 ಸಾವಿರ ಬಹುಮಾನವನ್ನು ಘೋಷಿಸಿದ್ದರು. ಈ ವರ್ಷದ ಆಗಸ್ಟ್‌ನಲ್ಲಿ ಮಧ್ಯಪ್ರದೇಶದ ನೌಗಾನ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದ. ಮಧ್ಯಪ್ರದೇಶದ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಪ್ರತಿ ಬಾರಿಯು ತಪ್ಪಿಸಿಕೊಳ್ಳುತ್ತಿದ್ದ ಎಂದು ಪೊಲೀಸ್ ಉಪ ವಿಭಾಗೀಯ ಅಧಿಕಾರಿ ಎಸ್.ಎಸ್.ಬಗೇಲ್ ತಿಳಿಸಿದ್ದಾರೆ.

ಚೌಬೆ ಮದುವೆಗೆ ಹೆಣ್ಣು ಹುಡುಕುತ್ತಿರುವ ವಿಚಾರವನ್ನು ತಿಳಿದ ಪೊಲೀಸರು, ಮಹಿಳಾ ಪೊಲೀಸ್ ಸಿಬ್ಬಂದಿಗೆ ಆತನನ್ನು ಸಂಪರ್ಕಿಸುವಂತೆ ಹೇಳಿದ್ದಾರೆ.

ADVERTISEMENT

ಇದಕ್ಕಾಗಿ ಪೊಲೀಸರು ಸದ್ಯ ನವದೆಹಲಿಯಲ್ಲಿ ವಾಸಿಸುತ್ತಿರುವ ಬುಂದೆಲ್‌ಖಂಡದ ಮಹಿಳಾ ಕಾರ್ಮಿಕರ ಹೆಸರಿನಲ್ಲಿ ಸಿಮ್ ಕಾರ್ಡ್ ಹೊಂದಿಸಿದ್ದಾರೆ. ಮಹಿಳಾ ಸಬ್‌ಇನ್‌ಸ್ಪೆಕ್ಟರ್ ಚೌಬೆಗೆ ಕರೆ ಮಾಡಿ ತಪ್ಪಾಗಿ ನಂಬರ್ ನಮೂದಿಸಿರುವುದಾಗಿ ತಿಳಿಸಿದ್ದಾರೆ. ಬಳಿಕ ಚೌಬೆ ಮಹಿಳೆಯ ಪೂರ್ವಾಪರವನ್ನು ವಿಚಾರಿಸಿ ಮೊಬೈಲ್ ಸಂಖ್ಯೆಯ ಅಸಲಿತನವನ್ನು ಪರಿಶೀಲಿಸಿದ್ದಾನೆ. ಅದಾದ ಬಳಿಕ ಚೌಬೆ ಹಿಂದಿಂದೆ ಕರೆ ಮಾಡಲು ಶುರು ಮಾಡಿದ್ದಾನೆ. ನಂತರ ಪರಸ್ಪರ ಇಬ್ಬರು ಮಾತನಾಡಿದ್ದಾರೆ. ಈ ವೇಳೆ ಮಹಿಳೆಯು ವಿವಾಹದ ಪ್ರಸ್ತಾಪವನ್ನಿಟ್ಟಿದ್ದಾರೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ತಿಲಕ್ ಸಿಂಗ್ ತಿಳಿಸಿದ್ದಾರೆ.

ಬಳಿಕ ರೋಕಾ ಕಾರ್ಯಕ್ರಮಕ್ಕಾಗಿ ಇಬ್ಬರು ಬಿಜೌರಿ ಗ್ರಾಮದ ದೇಗುಲದ ಬಳಿಯಲ್ಲಿ ಸಿಗಲು ಗುರುವಾರ ನಿರ್ಧರಿಸಿದ್ದಾರೆ. ಮಹಿಳಾ ಇನ್‌ಸ್ಪೆಕ್ಟರ್ ಇತರೆ ಪೊಲೀಸ್ ಸಿಬ್ಬಂದಿಯೊಂದಿಗೆ ಸಿವಿಲ್ ಡ್ರೆಸ್‌ನಲ್ಲಿ ಅಲ್ಲಿಗೆ ತೆರಳಿದ್ದಾರೆ. ಚೌಬೆ ಅಲ್ಲಿಗೆ ಬಂದ ಕೂಡಲೇ ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.