ADVERTISEMENT

ಅತಿಯಾದ ಮೊಬೈಲ್ ಬಳಕೆಗೆ ತಾಯಿ ಕೆಂಡಾಮಂಡಲ: ರಾಡ್‌ ಹೊಡೆತಕ್ಕೆ ಮೃತಪಟ್ಟ ಮಗಳು

ಪಿಟಿಐ
Published 21 ಮೇ 2024, 15:48 IST
Last Updated 21 ಮೇ 2024, 15:48 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಜೈಪುರ: ಮೊಬೈಲ್ ಗೀಳಿಗೆ ತುತ್ತಾಗಿದ್ದ ಮಗಳ ವರ್ತನೆಯಿಂದ ಕೆಂಡಾಮಂಡಲರಾದ ತಾಯಿ, ರಾಡ್‌ನಿಂದ ಹೊಡೆದು ಮಗಳನ್ನು ಕೊಂದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಮಂಗಳವಾರ ನಡೆದಿದೆ.

‘ಜೈಪುರದ ಬಿಂದಯಾಕ್‌ ಬಡಾವಣೆಯ ನಿಖಿತಾ ಸಿಂಗ್ (22) ಮೃತ ಯುವತಿ. ಅತಿಯಾದ ಮೊಬೈಲ್ ಬಳಕೆ ಕುರಿತು ತಾಯಿ ಸೀತಾ ಸಿಂಗ್‌ ಹಾಗೂ ಮಗಳು ನಿಖಿತಾ ನಡುವೆ ವಾಗ್ವಾದ ನಡೆದಿತ್ತು. ಆ ಸಂದರ್ಭದಲ್ಲಿ ಕೈಗೆ ಸಿಕ್ಕ ರಾಡ್‌ನಲ್ಲಿ ನಿಖಿತಾ ತಲೆಗೆ ಸೀತಾ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗೆ ನಿಖಿತಾ ತಯಾರಿ ನಡೆಸಿದ್ದರು. ಅವರ ತಂದೆ ಬ್ರಿಜೇಶ್ ಅವರು ಮಗಳ ಮೊಬೈಲ್ ಗೀಳು ಕುರಿತು ಹಲವು ಬಾರಿ ತಿಳಿ ಹೇಳಿದ್ದರು. ಎರಡು ತಿಂಗಳ ಹಿಂದೆಯೂ ಪಾಲಕರೊಂದಿಗೆ ನಿಖಿತಾ ಇದೇ ವಿಷಯವಾಗಿ ವಾಗ್ವಾದ ನಡೆಸಿದ್ದರು. ಆಗ, ಮೊಬೈಲ್ ಬಳಕೆಗೆ ಕಡಿವಾಣ ಹಾಕುವುದಾಗಿ ನಿಖಿತಾ ಪಾಲಕರಿಗೆ ವಾಗ್ದಾನ ಮಾಡಿದ್ದಳು.

ಆದರೆ ಸೋಮವಾರ ಬೆಳಿಗ್ಗೆ ಬ್ರಿಜೇಶ್ ಕೆಲಸಕ್ಕೆ ಹೊರಡುವ ಮೊದಲು ಮಗಳ ಕೈಯಲ್ಲಿ ಫೋನ್ ಕಂಡು ಸಿಟ್ಟಾದರು. ಅದನ್ನು ಕಸಿದು ಸೀತಾ ಕೈಯಲ್ಲಿ ಕೊಟ್ಟು, ಬಚ್ಚಿಡುವಂತೆ ಹೇಳಿ ಅವರು ಕೆಲಸಕ್ಕೆ ಹೋದರು. 

ತಂದೆ ಕೆಲಸಕ್ಕೆ ತೆರಳಿದ ನಂತರ ತಾಯಿ ಹಾಗೂ ಮಗಳ ನಡುವೆ ಇದೇ ವಿಷಯವಾಗಿ ವಾಗ್ವಾದ ನಡೆದಿದೆ. ಮಗಳ ಮಾತಿಗೆ ಸೀತಾ ಸಿಟ್ಟಿಗೆದ್ದಿದ್ದಾರೆ. ಮನೆಯಲ್ಲಿದ್ದ ರಾಡ್‌ನಿಂದ ನಿಖಿತಾ ತಲೆಗೆ ಹೊಡೆದಿದ್ದಾರೆ. ಆಘಾತದಿಂದ ಪ್ರಜ್ಞೆ ತಪ್ಪಿ ಬಿದ್ದ ನಿಖಿತಾರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.

‘ಸೀತಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ’ ಎಂದು ಠಾಣಾಧಿಕಾರಿ ಭಜನ್‌ಲಾಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.