ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ 55 ವರ್ಷದ ಮಹಿಳೆಯಲ್ಲಿ ಝೀಕಾ ವೈರಾಣು ಸೋಂಕು ಪತ್ತೆಯಾಗಿದ್ದು, ಇದರಿಂದ ಪ್ರಕರಣಗಳ ಒಟ್ಟು ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸೋಮವಾರದವರೆಗೆ ಒಟ್ಟು ಆರು ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 28 ಹಾಗೂ 35 ವರ್ಷದ ಇಬ್ಬರು ಗರ್ಭಿಣಿಯರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು.
ಮಂಗಳವಾರ ಪತ್ತೆಯಾದ ಪ್ರಕರಣದಲ್ಲಿ ದಹಾನುಕರ್ ಕಾಲೊನಿಯ ಮಹಿಳೆಯು ತುರಿಕೆ ಹಾಗೂ ಸಂಧಿ ನೋವು ಸಮಸ್ಯೆಯಿಂದ ಬಳಲುತ್ತಿದ್ದರು. ತಪಾಸಣೆ ನಡೆಸಿದ ನಂತರ ಇವರಲ್ಲಿ ಝೀಕಾ ವೈರಾಣು ಇರುವುದು ಖಚಿತವಾಯಿತು. ಮಹಿಳೆ ಆರೋಗ್ಯವಾಗಿದ್ದಾರೆ. ಆಸ್ಪತ್ರೆ ದಾಖಲಾತಿಯ ಅಗತ್ಯವಿಲ್ಲ ಎಂದು ಪುಣೆ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆಯ ಎರಂಡ್‌ವಾನೆ ಎಂಬ ಮೊದಲ ಝೀಕಾ ಪ್ರಕರಣ ಲ್ಲಿ ಪತ್ತೆಯಾಗಿತ್ತು. 46 ವರ್ಷದ ವೈದ್ಯರೊಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಜತೆಗೆ ಅವರ 15 ವರ್ಷದ ಮಗಳಿಗೂ ಸೋಂಕು ಇರುವುದು ಖಚಿತವಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗರ್ಭಿಣಿಯರಲ್ಲಿ ಝೀಕಾ ವೈರಾಣುವಿನ ಸೋಂಕು ಉಲ್ಬಣಿಸಿದಲ್ಲಿ ಮೈಕ್ರೊಸೆಫಲಿ ಸಮಸ್ಯೆ ಎದುರಾಗುವ ಅಪಾಯವಿದೆ. ಇದರಲ್ಲಿ ಭ್ರೂಣದ ತಲೆಯ ಗಾತ್ರ ಚಿಕ್ಕದಾಗಿ ಮೆದುಳು ಬೆಳವಣಿಗೆಯಾಗದಿರುವ ಅಪಾಯವೂ ಇದೆ ಎಂದು ತಜ್ಞರು ಹೇಳಿದ್ದಾರೆ.
ಝೀಕಾ ವೈರಾಣು ಹರಡಲು ಏಡಿಸ್ ಸೊಳ್ಳೆಯು ವಾಹಕದಂತೆ ಕೆಲಸ ಮಾಡುತ್ತದೆ. ಸೋಂಕು ಇರುವ ವ್ಯಕ್ತಿಗೆ ಕಚ್ಚಿ ರಕ್ತ ಹೀರುವ ಇವು, ಆರೋಗ್ಯವಂತ ವ್ಯಕ್ತಿಗೂ ಕಚ್ಚಿದರೆ ಅವರಿಗೂ ಸೋಂಕು ತಗುಲುವ ಅಪಾಯವಿದೆ. ಡೆಂಗಿ ಹಾಗೂ ಚಿಕೂನ್‌ಗೂನ್ಯದಂತೆಯೇ ಝೀಕಾ ಕೂಡಾ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಝೀಕಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪುಣೆಯ ಮಹಾನಗರ ಪಾಲಿಕೆಯು ಮನೆ ಮನೆ ಸಮೀಕ್ಷೆ ಆರಂಭಿಸಿದೆ. ಬಡಾವಣೆಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸಲು ರಾಸಾಯನಿಕ ಸಿಂಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.