ADVERTISEMENT

ಜಮ್ಮು: ಭಾರಿ ಮಳೆಗೆ ಕುಸಿದ ಮನೆ; ವೃದ್ಧೆ ಸಾವು

ಪಿಟಿಐ
Published 7 ಆಗಸ್ಟ್ 2024, 16:36 IST
Last Updated 7 ಆಗಸ್ಟ್ 2024, 16:36 IST
 ಸಾಂದರ್ಭಿಕ ಚಿತ್ರ
 ಸಾಂದರ್ಭಿಕ ಚಿತ್ರ   

ಜಮ್ಮು: ಜಮ್ಮುವಿನ ವಿವಿಧೆಡೆ ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಹಲವು ಮನೆಗಳು ಕೊಚ್ಚಿಹೋಗಿದ್ದು, ರಾಜೌರಿ ಜಿಲ್ಲೆಯ ಗ್ರಾಮವೊಂದರಲ್ಲಿ ವೃದ್ಧೆಯೊಬ್ಬರು ಸಾವಿಗೀಡಾಗಿದ್ದಾರೆ.

ಮೃತಪಟ್ಟವರನ್ನು ಕಾಕೊ ದೇವಿ(60) ಎಂದು ಗುರುತಿಸಲಾಗಿದೆ. ಇದೇ ವೇಳೆ ಮೃತರು ಸಾಕಿದ್ದ ಎರಡು ಹಸುಗಳು ಕೂಡ ಮಣ್ಣಿನ ಅವಶೇಷಗಳ ಅಡಿ ಸಿಲುಕಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಕಠುವಾ ಜಿಲ್ಲೆಯ ದೂಂಗಾದಲ್ಲಿ ಮೇಘಸ್ಫೋಟದಿಂದಾಗಿ ಕನಿಷ್ಠ ಎಂಟು ಮನೆಗಳು ಕೊಚ್ಚಿಹೋಗಿದ್ದು, ಸಾವು ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಲವು ರಸ್ತೆಗಳು ಹಾಳಾಗಿದ್ದು, ಸಂಚಾರ ಅಡಚಣೆ ಉಂಟಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ರಾಜೌರಿಯಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಯ ವರೆಗೆ ಕಳೆದ 24 ಗಂಟೆಯ ಅವಧಿಯಲ್ಲಿ 74 ಮಿ.ಮೀ. ಮಳೆಯಾಗಿದೆ. ಜಮ್ಮುವಿನಲ್ಲಿ 48.5 ಮಿ.ಮೀ. ಹಾಗೂ ರಾಂಬಾನ್‌ ಜಿಲ್ಲೆಯಲ್ಲಿ 17.5 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 15ರ ವರೆಗೆ ಮಳೆ ಮುಂದುವರಿಯಲಿದ್ದು, ಕಣಿವೆ ಪ್ರದೇಶಗಳಲ್ಲಿ ಭೂಕುಸಿತವಾಗುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.