ಚೆನ್ನೈ: ಪುಣೆ ಪೋಶೆ ಐಷಾರಾಮಿ ಕಾರು ದುರಂತ ಮಾಸುವ ಮುನ್ನವೇ ಇಂತಹದ್ದೇ ಮತ್ತೊಂದು ಘಟನೆ ಚೆನ್ನೈ ಮಹಾನಗರಿಯಲ್ಲಿ ಮಂಗಳವಾರ ನಡೆದಿರುವುದು ಬೆಳಕಿಗೆ ಬಂದಿದೆ.
ವೈಎಸ್‌ಆರ್‌ಸಿಪಿಯ ರಾಜ್ಯಸಭಾ ಸದಸ್ಯ ಹಾಗೂ ಉದ್ಯಮಿ ಬೀಡಾ ಮಸ್ತಾನ್ ರಾವ್ ಅವರ ಮಗಳು ಐಷಾರಾಮಿ ಕಾರು ಚಲಾಯಿಸಿ ಯುವಕನೊಬ್ಬನ ಸಾವಿಗೆ ಕಾರಣರಾಗಿದ್ದಾರೆ ಎಂದು ವರದಿಯಾಗಿದೆ.
ಅಡ್ಯಾರ್ ವಲಯದಲ್ಲಿ ಮಾಧುರಿ ಎನ್ನುವರು ಫುಟ್‌ಪಾತ್ ಮೇಲೆ ಮಲಗಿದ್ದ ಸೂರ್ಯ ಎನ್ನುವ 21 ವರ್ಷದ ಪೇಟಿಂಗ್ ಕೆಲಸ ಮಾಡುವ ಯುವಕನ ಮೇಲೆ ತಮ್ಮ ಬಿಎಂಡಬ್ಲ್ಯೂ ಕಾರು ಚಲಾಯಿಸಿದ್ದಾರೆ. ಇದರಿಂದ ಯುವಕ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಯುವಕನ ಮೇಲೆ ಕಾರು ಹರಿಸಿದಾಗ ಸ್ಥಳದಲ್ಲಿದ್ದ ಕೆಲವು ವ್ಯಕ್ತಿಗಳು ಪರಾರಿಯಾಗಲು ಯತ್ನಿಸಿದ ಮಾಧುರಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅವರ ಜೊತೆ ಸ್ನೇಹಿತೆಯೂ ಇದ್ದರು. ಕೂಡಲೇ ಅಡ್ಯಾರ್ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಠಾಣೆ ಜಾಮೀನು ಮೇಲೆ ಅವರನ್ನು ಅಂದೇ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಶಾಸ್ತ್ರೀ ನಗರದಲ್ಲಿರುವ ಮೃತನ ಸಂಬಂಧಿಕರು ದೂರು ನೀಡಿದ್ದು ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೀಡಾ ಮಸ್ತಾನ್ ರಾವ್ ಅವರು ಜಿಎಂಆರ್ ಗ್ರೂಪ್ ಕಂಪನಿಯ ಮುಖ್ಯಸ್ಥರೂ ಆಗಿದ್ದು ಅವರು ಈ ಹಿಂದೆ ಒಮ್ಮೆ ಆಂಧ್ರಪ್ರದೇಶದ ಶಾಸಕರೂ ಆಗಿದ್ದರು.
ಮಾಧುರಿ ಅವರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.