ನವದೆಹಲಿ: ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು, ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಬಲವಂತವಾಗಿ ಆ್ಯಸಿಡ್ ಕುಡಿಸಿರುವ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
ಸದ್ಯ ಮಹಿಳೆಯನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಆಯೋಗ ತಿಳಿಸಿದೆ.
ಅಪರಾಧಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಮತ್ತು ಪ್ರಕರಣವನ್ನು ಸೂಕ್ಷ್ಮವಾಗಿ ಪರಿಗಣಿಸಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಮಲಿವಾಲ್, ಚೌಹಾಣ್ ಅವರನ್ನು ಕೇಳಿಕೊಂಡಿದ್ದಾರೆ.
ಜೂನ್ 28ರಂದು 25 ವರ್ಷದ ಮಹಿಳೆಗೆ ಆಕೆಯ ಪತಿ ಮತ್ತು ಅತ್ತಿಗೆ ಸೇರಿ ಬಲವಂತವಾಗಿ ಆ್ಯಸಿಡ್ ಕುಡಿಸಿದ್ದರು. ಈ ವೇಳೆ ನೆರೆಹೊರೆಯವರು ಕೂಡಲೇ ಮಹಿಳೆಯನ್ನು ಗ್ವಾಲಿಯರ್‌ನ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಮಧ್ಯಪ್ರದೇಶದ ಪೊಲೀಸರು ಈ ವಿಷಯದಲ್ಲಿ 'ದುರ್ಬಲ' ಎಫ್‌ಐಆರ್ ದಾಖಲಿಸಿದ್ದಾರೆ. ಆ್ಯಸಿಡ್ ದಾಳಿಯ ಬದಲು ಕೌಟುಂಬಿಕ ದೌರ್ಜನ್ಯ ಎಂದು ದಾಖಲಿಸಿಕೊಂಡಿದ್ದಾರೆ ಎಂದು ಮಹಿಳಾ ಆಯೋಗದ ಮುಖ್ಯಸ್ಥೆ ಆರೋಪಿಸಿದ್ದಾರೆ.
ಮಹಿಳೆಯ ಸ್ಥಿತಿ ಹದಗೆಟ್ಟಿದ್ದರಿಂದಾಗಿ ಆಕೆಯ ಸಹೋದರ ಆಯೋಗದ 181 ಸಹಾಯವಾಣಿಗೆ ಕರೆ ಮಾಡಿದಾಗ ಜುಲೈ 18 ರಂದು ಆಯೋಗದ ತಂಡವು ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ದೆಹಲಿ ಆಸ್ಪತ್ರೆಗೆ ದಾಖಲಿಸಿತು ಮತ್ತು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್(ಎಸ್‌ಡಿಎಂ)ನಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು.
ಆಕೆ ಪತಿಯು ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಬಗ್ಗೆ ಮಹಿಳೆಗೆ ತಿಳಿದಿದೆ. ಬಳಿಕ ಗಂಡನೇ ಅವಳನ್ನು ಕ್ರೂರವಾಗಿ ಥಳಿಸಿ, ಬಲವಂತವಾಗಿ ಆ್ಯಸಿಡ್ ಕುಡಿಯುವಂತೆ ಮಾಡಿದ್ದಾನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಮಲಿವಾಲ್ ಮತ್ತು ಡಿಸಿಡಬ್ಲ್ಯು ಸದಸ್ಯೆ ಪ್ರೋಮಿಲಾ ಗುಪ್ತಾ ಆಸ್ಪತ್ರೆಗೆ ತೆರಳಿ ಸಂತ್ರಸ್ತೆಯನ್ನು ಭೇಟಿಯಾಗಿದ್ದಾರೆ. ಮಹಿಳೆಯು ತುಂಬಾ ಗಂಭೀರ ಸ್ಥಿತಿಯಲ್ಲಿದ್ದು, ಆಕೆಯ ದೇಹದೊಳಗಿನ ಅಂಗಗಳು ಸಂಪೂರ್ಣವಾಗಿ ಸುಟ್ಟು ಹಾನಿಗೊಂಡಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಮಲಿವಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.