ADVERTISEMENT

ಮಹಿಳೆಯ ಎಳೆದಾಡಿದ ಪ್ರಕರಣ | ಅಪರಾಧಿಗಳ ಮೇಲೆ ಬುಲೆಟ್‌ ರೈಲು ಓಡಿಸುತ್ತೇವೆ: ಯೋಗಿ

ಜಲಾವೃತ ಬೀದಿಯಲ್ಲಿ ಮಹಿಳೆಯನ್ನು ಎಳೆದಾಡಿದ ಪ್ರಕರಣ: ಎಂಟು ಪೊಲೀಸರ ಅಮಾನತು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 15:46 IST
Last Updated 1 ಆಗಸ್ಟ್ 2024, 15:46 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಲಖನೌ: ಇಲ್ಲಿನ ಐಷಾರಾಮಿ ಗೋಮತಿ ನಗರದ ಜಲಾವೃತ ಬೀದಿಯಲ್ಲಿ ರೌಡಿಗಳ ಗುಂಪು ಬುಧವಾರ ಮಹಿಳೆಯೊಬ್ಬರನ್ನು ಎಳೆದಾಡಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ನಿರ್ಲಕ್ಷ್ಯದ ಆರೋಪದ ಮೇಲೆ ಡಿಸಿಪಿ ಸೇರಿದಂತೆ ಎಂಟು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. 

ಈ ಪ್ರಕರಣ ಕುರಿತು ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ, ಗುರುವಾರ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ‘ಅಪರಾಧಿಗಳ ಮೇಲೆ ಬುಲೆಟ್‌ ರೈಲನ್ನೇ ಓಡಿಸಲಾಗುವುದು’ ಎಂದರು.

ಏನಿದು ಪ್ರಕರಣ?:

ಜಲಾವೃತವಾಗಿದ್ದ ಬೀದಿಯಲ್ಲಿ ಸಾಗುತ್ತಿದ್ದ ಬೈಕಿನ ಹಿಂಬದಿ ಕುಳಿತಿದ್ದ ಮಹಿಳೆಯನ್ನು ಈ ಗುಂಪು ಗುರಿಯಾಸಿತ್ತು. ಗುಂಪಿನಲ್ಲಿದ್ದ ಹತ್ತಾರು ಜನರು ವಾಹನ ಸವಾರ ಮತ್ತು ಹಿಂಬದಿ ಸವಾರರ ಮೇಲೆ ನೀರನ್ನು ಎರಚಿ ಕಿರುಕುಳ ನೀಡಿದರು. ಅಲ್ಲದೆ ಬೈಕ್‌ ಮುಂದೆ ಸಾಗದಂತೆ ಹಿಂದಿನಿಂದ ಹಿಡಿದಿಟ್ಟುಕೊಂಡು ಎಳೆದಾಡಿ ಮಹಿಳೆಯನ್ನು ಕೆಳಕ್ಕೆ ಬೀಳಿಸಿದರು. ಈ ಕುರಿತು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿ, ತೀವ್ರ ಟೀಕೆಗೆ ಗುರಿಯಾಗಿತ್ತು.

ADVERTISEMENT

ಎಂಟು ಪೊಲೀಸರ ಅಮಾನತು:

ನಿರ್ಲಕ್ಷ್ಯದ ಆರೋಪದ ಮೇರೆಗೆ ಸ್ಥಳೀಯ ಪೊಲೀಸ್‌ ಠಾಣೆಯ ಉಸ್ತುವಾರಿ ಸೇರಿದಂತೆ ಐವರು ಪೊಲೀಸರು ಹಾಗೂ ಲಖನೌ ಪೂರ್ವ ವಲಯದ ಡಿಸಿಪಿ, ಹೆಚ್ಚುವರಿ ಡಿಸಿಪಿ, ಎಸಿಪಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಗುರುವಾರ ಪ್ರಕಟಣೆ ತಿಳಿಸಿದೆ.

ವಿಧಾನಸಭೆಯಲ್ಲಿ ಪೂರಕ ಬಜೆಟ್‌ ಕುರಿತು ಮಾತನಾಡುತ್ತಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಪ್ರಕರಣದ ಕುರಿತು ಉಲ್ಲೇಖ ಮಾಡಿದರು. ಪವನ್‌ ಯಾದವ್‌ ಮತ್ತು ಮೊಹಮ್ಮದ್‌ ಅರ್ಬಾಜ್‌ ಎಂಬುವರು ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು, ‘ಸದ್ಭಾವನಾ’ ಜನರಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಆದರೆ ಅವರ ಮೇಲೆ ‘ಸದ್ಭಾವನಾ ರೈಲು’ ಓಡಿಸುವುದಿಲ್ಲ. ಬದಲಿಗೆ, ಬುಲೆಟ್‌ ರೈಲನ್ನೇ ಓಡಿಸಲಾಗುವುದು, ಚಿಂತಿಸಬೇಡಿ ಎಂದು ಹೇಳಿದರು.

‘ರಾಜ್ಯದಲ್ಲಿ ಬುಲೆಟ್‌ ರೈಲಿಗಾಗಿ ಸಿದ್ಧತೆಗಳು ನಡೆಯುತ್ತಿವೆ. ಯಾರಾದರೂ ಮಹಿಳಾ ಸುರಕ್ಷತೆ ಜತೆ ಆಟವಾಡಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು. 

ಈ ಘಟನೆ ಕುರಿತು ಪ್ರಕರಣ ದಾಖಲಿಸಿರುವ ಗೋಮತಿ ನಗರ ಪೊಲೀಸರು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.